ಕನ್ನಡಪ್ರಭ ವಾರ್ತೆ ಬೆಂಗಳೂರು
ಧಾರವಾಡ, ಹಾವೇರಿ, ಉತ್ತರ ಕನ್ನಡ, ಕೊಡಗು, ಬೀದರ್, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾನುವಾರ ಕೆಲ ಹೊತ್ತು ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಹಲವೆಡೆ ಭಾನುವಾರ ಮಧ್ಯಾಹ್ನ ಗುಡುಗು-ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಕಣತಿ ಗ್ರಾಮದಲ್ಲಿ ಮರ ಬಿದ್ದು, 4-5 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿ ಕೊಡಗಿನ ಕೆಲವೆಡೆ ಸಾಧಾರಣ ಮಳೆಯಾಗಿದೆ. ಬೆಳಗಾವಿ ನಗರದ ಸುತ್ತಮುತ್ತ ಅರ್ಧ ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವಂತಾಯಿತು.ಧಾರವಾಡ ಜಿಲ್ಲೆಯ ಅಳ್ನಾವರದಲ್ಲಿ ಆಲಿಕಲ್ಲು, ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಆಲಿಕಲ್ಲುಗಳು ನೆಲದ ಮೇಲೆ ಮುತ್ತಿನ ರಾಶಿ ಹಾಕಿದಂತಾಗಿತ್ತು. ಬಿಸಿಲಿನ ತಾಪಕ್ಕೆ ಒಣಗುತ್ತಿದ್ದ ಕಬ್ಬಿನ ಬೆಳೆಗೆ ಈ ಮಳೆಯಿಂದಾಗಿ ಮರುಜೀವ ಬಂದಂತಾಗಿದೆ. ಗದ್ದೆಗಳಲ್ಲಿ ನೀರು ನಿಂತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ, ಮಾವಿನ ಬೆಳೆಗೆ ಹಾನಿಯಾಗಿದ್ದು, ಮಾವಿನ ಕಾಯಿಗಳನ್ನು ಘಾಸಿಗೊಳಿಸಿದೆ.ಹಾವೇರಿ ಜಿಲ್ಲೆಯ ಶಿಗ್ಗಾಂವಿ, ರಾಣಿಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ ಹಾಗೂ ಬ್ಯಾಡಗಿ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. ಅಕಾಲಿಕ ಮಳೆಯಿಂದ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಒಕ್ಕಲುತನ ಮಾಡುತ್ತಿದ್ದ ರೈತರು ಸಮಸ್ಯೆ ಎದುರಿಸುವಂತಾಯಿತು.
ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನಾದ್ಯಂತ ಆಲಿಕಲ್ಲು, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಮುಂಡಗೋಡ ಸಮೀಪದ ಪಾಳಾ-ಹಾನಗಲ್ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಆಕಾರದ ಮಾವಿನ ಮರ ಉರುಳಿ ಬಿದ್ದು ಸುಮಾರು 2 ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಗಾಳಿ, ಮಳೆಯ ರಭಸಕ್ಕೆ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಮನೆಗಳ ಮೇಲ್ಚಾವಣಿಗಳು ಹಾರಿ ಹೋಗಿದ್ದು, ಗೃಹ ಬಳಕೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾದವು. ಭಟ್ಕಳ ತಾಲೂಕಿನ ವಿವಿಧೆಡೆ ರಾತ್ರಿ 7.40ರಿಂದ ಅರ್ಧ ತಾಸಿಗೂ ಹೆಚ್ಚು ಕಾಲ ಮಳೆ ಸುರಿಯಿತು.
ಔರಾದ್, ಕಮಲನಗರ, ಭಾಲ್ಕಿ, ಬಸವಕಲ್ಯಾಣ ಸೇರಿ ಬೀದರ್ ಜಿಲ್ಲೆಯ ಹಲವೆಡೆ ಸಂಜೆ ಒಂದು ತಾಸಿಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯಿತು. ಶಿವಮೊಗ್ಗ ಸುತ್ತಮುತ್ತ ಮಳೆಯಾಗಿದ್ದು, ನಗರ ಹೊರವಲಯದ ಗೋಪಿ ಶೆಟ್ಟಿಕೊಪ್ಪದಲ್ಲಿ ಸಿಡಿಲಿಗೆ ತೆಂಗಿನಮರವೊಂದು ಹೊತ್ತಿ ಉರಿದಿದೆ.