ಸಚಿವ ಸ್ಥಾನದಿಂದ ತಂಗಡಗಿ ವಜಾಗೊಳಿಸಿ: ಎಸ್.ದತ್ತಾತ್ರಿ ಆಗ್ರಹ

| Published : Mar 28 2024, 12:47 AM IST

ಸಚಿವ ಸ್ಥಾನದಿಂದ ತಂಗಡಗಿ ವಜಾಗೊಳಿಸಿ: ಎಸ್.ದತ್ತಾತ್ರಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನಲ್ಲಿ ಈ ರೀತಿ ಕೆಟ್ಟ ಸಂಸ್ಕೃತಿ ಬೆಳೆದು ಬಂದಿದೆ. ರಾಹುಲ್‍ಗಾಂಧಿ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ಕೂಡ ಮೋದಿ ಅವರನ್ನು ಸಾವಿನ ವ್ಯಾಪಾರಿ, ವಿಷಸರ್ಪ, ಚೋರ್‌ಗುರು ಎಂದೇಲ್ಲ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮೋದಿ ಲಕ್ಷಾಂತರ ಉದ್ಯೋಗಗಳ ನೀಡಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಜಗತ್ತಿನಲ್ಲೇ ನಾವು ನಂ.1 ಸ್ಥಾನದಲ್ಲಿದ್ದೇವೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂಸ್ಕೃತಿಯೇ ಇಲ್ಲದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲ ಅವರ ಖಾತೆಯನ್ನಾದರೂ ಬದಲಾಯಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸೇರಿ ಕಾಂಗ್ರೆಸ್‍ನ ನಾಯಕರು ಮೋದಿಯನ್ನು ಟೀಕಿಸುವ ಭರದಲ್ಲಿ ಸಂಸ್ಕೃತಿಯನ್ನೇ ಮರೆತ್ತಿದ್ದಾರೆ. ಮೋದಿಗೆ ಜೈಕಾರ ಹಾಕಿದವರಿಗೆ ಕಪಾಳ ಮೋಕ್ಷ ಮಾಡಬೇಕು ಎಂದು ಹೀನಾಯವಾಗಿ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಹೇಗೆ ಮಾತನಾಡಬೇಕು ಎಂಬುದೇ ಇವರಿಗೆ ಅರಿವು ಇಲ್ಲ. ತಕ್ಷಣ ಈ ಇಲಾಖೆಯಿಂದ ಅವರನ್ನು ತೆಗೆಯಬೇಕು. ರಾಜ್ಯಪಾಲರು ಅವರನ್ನು ಸಚಿವ ಸ್ಥಾನದಿಂದಲೇ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಡಿಜಿಟಲ್ ಕ್ಷೇತ್ರದಲ್ಲಿ ನಾವು ನಂ.1 ಸ್ಥಾನ:

ಕಾಂಗ್ರೆಸ್‌ನಲ್ಲಿ ಈ ರೀತಿ ಕೆಟ್ಟ ಸಂಸ್ಕೃತಿ ಬೆಳೆದು ಬಂದಿದೆ. ರಾಹುಲ್‍ಗಾಂಧಿ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ಕೂಡ ಮೋದಿ ಅವರನ್ನು ಸಾವಿನ ವ್ಯಾಪಾರಿ, ವಿಷಸರ್ಪ, ಚೋರ್‌ಗುರು ಎಂದೇಲ್ಲ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮೋದಿ ಲಕ್ಷಾಂತರ ಉದ್ಯೋಗಗಳ ನೀಡಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಜಗತ್ತಿನಲ್ಲೇ ನಾವು ನಂ.1 ಸ್ಥಾನದಲ್ಲಿದ್ದೇವೆ. 2014ರಲ್ಲಿ ಕೇವಲ 350 ಸ್ಟಾರ್ಟ್‌ಅಪ್ ಗಳಿದ್ದವು. ಈಗ 2024ರಲ್ಲಿ 1 ಲಕ್ಷದ 17 ಸಾವಿರ ಸ್ಟಾರ್ಟ್‌ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. 2013ರವರೆಗೆ 641 ವೈದ್ಯಕೀಯ ಕಾಲೇಜುಗಳಿದ್ದವು. ಈಗ 1,341 ವೈದ್ಯಕೀಯ ಕಾಲೇಜುಗಳಾಗಿವೆ. ಕಾಂಗ್ರೆಸ್‌ ಸರ್ಕಾರದಲ್ಲಿ 73 ವಿಮಾನ ನಿಲ್ದಾಣ ದೇಶದಲ್ಲಿತ್ತು. ಮೋದಿ ಆಡಳಿತದಲ್ಲಿ 481 ವಿಮಾನ ನಿಲ್ದಾಣಗಳಾಗಿವೆ ಎಂದು ತಿಳಿಸಿದರು.

ವಿಶ್ವದಲ್ಲೇ ಬಡತನದ ರೇಖೆಯಲ್ಲಿ 24.8ನೇ ಸ್ಥಾನದಲ್ಲಿದ್ದ ನಾವು ಈಗ 14.8ಕ್ಕೆ ಇಳಿದಿದ್ದೇವೆ. ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ. ನಾರಿ ಶಕ್ತಿ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅನೇಕ ಕಾನೂನುಗಳ ಸರಳೀಕರಣ ಮಾಡಿ, ಯುವಕರಿಗೆ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಗುರುತಿಸುವಂತಾಗಿದೆ. ಯುವಕರು, ರೈತರು, ಮಹಿಳೆಯರು, ಕಾರ್ಮಿಕರಿಗಾಗಿ ಅವರು ದುಡಿಯುತ್ತಲೇ ಇದ್ದಾರೆ. ಈ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಮೋದಿ ಇದ್ದರೆ ಮಾತ್ರ ಇವೆಲ್ಲ ಸಾಧ್ಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೃಷಿಕೇಶ್ ಪೈ, ವಿನ್ಸಂಟ್ ರೋಡ್ರಿಗ್ರಸ್ ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಇದ್ದರು.

-------------