ಕಾರ್ಕಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ವ್ಯವಸ್ಥೆ ಶುದ್ಧೀಕರಣ ಕುರಿತು ಬರೆದ ಲೇಖನಕ್ಕೆ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದಲ್ಲಿ ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು ಎಂಬ ಆಶಯವನ್ನು ಸ್ವಾಗತಿಸಿರುವ ಅವರು, ಚುನಾವಣಾ ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ತಮ್ಮ ಆಡಳಿತಾವಧಿಯಲ್ಲಿನ ಭ್ರಷ್ಟಾಚಾರ ಹಾಗೂ ನೈತಿಕ ಪ್ರಶ್ನೆಗಳ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣ, ಬಿ. ನಾಗೇಂದ್ರ ಮರುಸಚಿವ ಸಂಪುಟ ಸೇರ್ಪಡೆ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಪ್ರಶ್ನೆಗಳು ಹಾಗೂ ಮುಡಾ ಪ್ರಕರಣವನ್ನು ಉಲ್ಲೇಖಿಸಿರುವ ಸುನಿಲ್ ಕುಮಾರ್, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದು ಕೇವಲ ಚುನಾವಣಾ ವ್ಯವಸ್ಥೆಯಲ್ಲ, ಆಡಳಿತದಲ್ಲಿ ದ್ವಂದ್ವ ಮಾನದಂಡ, ನೈತಿಕತೆಯ ಕೊರತೆ ಮತ್ತು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸದ ಸಂಸ್ಕೃತಿಯೂ ಅಷ್ಟೇ ಅಪಾಯಕಾರಿ ಎಂದು ಹೇಳಿದ್ದಾರೆ.
ಈ ಎಲ್ಲ ವಿಚಾರಗಳು ಸಿದ್ದರಾಮಯ್ಯ ಅವರ ಲೇಖನದಲ್ಲಿ ಸೇರಿದ್ದರೆ ಅದು ಇನ್ನಷ್ಟು ಸಮಗ್ರ ಹಾಗೂ ಎಲ್ಲರನ್ನು ಒಳಗೊಂಡ ಬರಹವಾಗುತ್ತಿತ್ತು ಎಂದು ಸುನಿಲ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.