ಸಾರಾಂಶ
ಗೋಕರ್ಣ: ಪ್ರವಾಸಿ ಬೋಟ್ ಸಮುದ್ರದ ಹಿನ್ನೀರಿನಲ್ಲಿ ಮುಳುಗಿದ ಘಟನೆ ತದಡಿ ಮೂಡಂಗಿ ಬಳಿ ಭಾನುವಾರ ಸಂಜೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಜೀವಾಪಾಯದಿಂದ ಪಾರಾಗಿದ್ದಾರೆ.
ಒಟ್ಟು ೪೨ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿರುವ ವೇಳೆ ಪಲ್ಟಿ ಹೊಡೆದಿದ್ದು, ಪ್ರಯಾಣಿಕರು ನೀರಿನಲ್ಲಿ ಮುಳುಗುತ್ತಿದ್ದರು. ತಕ್ಷಣ ಸ್ಥಳೀಯ ಬೋಟ್ ಹಾಗೂ ಕರಾವಳಿ ಕಾವಲು ಪೊಲೀಸ್ ಪಡೆಯ ಬೋಟ್‌ನಿಂದ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಕೆಲವು ಪ್ರವಾಸಿಗರು ಈಜಿ ದಡ ಸೇರಿದ್ದಾರೆ.ಸ್ವಲ್ಪ ದೂರ ಬೋಟ್ ಪ್ರಯಾಣಿಸಿದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಹೈದರಾಬಾದ್, ತೆಲಂಗಾಣ, ಮಹಾರಾಷ್ಟ್ರ ಮತ್ತು ಹಾಸನದ ಪ್ರವಾಸಿಗರಾಗಿದ್ದು, ಅವರಲ್ಲಿ ಮಹಿಳೆಯರು, ಮಕ್ಕಳು, ಯುವಕರು ಸೇರಿದ್ದಾರೆ. ಪ್ರಯಾಣಿಕರ ಮೊಬೈಲ್ ಮತ್ತಿತರ ಬೆಲೆಬಾಳುವ ವಸ್ತು ನೀರುಪಾಲಾಗಿದೆ. ಗೋಕರ್ಣ ಪೊಲೀಸ್ ಠಾಣೆ ಪಿಐ ಯೋಗೇಶ ಕೆ.ಎಂ. ಹಾಗೂ ಸಿಬ್ಬಂದಿ, ಕರಾವಳಿ ಕಾವಲು ಪೊಲೀಸ್ ಪಡೆಯ ಪಿಎಸ್ಐ ಅನೂಪ ನಾಯಕ ಮತ್ತು ಸಿಬ್ಬಂದಿ ಸ್ಥಳದಲ್ಲಿ ಇದ್ದರು. ಬೋಟ್ ಎಲ್ಲಿಗೆ ಹೊರಟಿತ್ತು?: ಭಾನುವಾರವಾದ ಕಾರಣ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು. ತದಡಿಯ ಗಣೇಶ ರಮೇಶ ಮೂಡಂಗಿ ಎಂಬವರ ಬೋಟ್‌ನಲ್ಲಿ ಹಾಫ್‌ಮೂನ್ ಬೀಚ್ ಮತ್ತಿತರ ಕಡೆ ಕರೆದುಕೊಂಡು ಹೋಗುವವರಿದ್ದರು. ಅಲ್ಲಿ ಈಜು ಮತ್ತಿತರ ಚಟುವಟಿಕೆಯಲ್ಲಿ ಪ್ರವಾಸಿಗರು ತೊಡಗಿಕೊಳ್ಳುವವರಾಗಿದ್ದರು ಎಂದು ತಿಳಿದುಬಂದಿದೆ. ಘಟನೆ ಕುರಿತು ಕರಾವಳಿ ಕಾವಲು ಪಡೆಯ ಪಿಎಸ್ಐ ಅನೂಪ ನಾಯಕ ಮಾತನಾಡಿ, ಪ್ರಯಾಣಿಕರ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೇಕಿದೆ ಕಡಿವಾಣ: ಈ ಭಾಗದಲ್ಲಿ ಯಾವುದೇ ಅನುಮತಿ, ಸುರಕ್ಷತಾ ಕ್ರಮವಿಲ್ಲದೆ ಪ್ರವಾಸಿ ಬೋಟ್‌ಗಳನ್ನು ನಡೆಸುತ್ತಿದ್ದು, ಇಂಥವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಪ್ರವಾಸಿಗರ ಜೀವರಕ್ಷಣೆ ಮಾಡುವಂತೆ ಸ್ಥಳೀಯರು ಸಂಬಂಧಿಸಿದ ಇಲಾಖೆಗೆ ಆಗ್ರಹಿಸಿದ್ದಾರೆ.