ಸಾರಾಂಶ
ಕ್ಯಾರೋಲ್ಸ್ ಅಂಗವಾಗಿ ಸಾಂತಕ್ಲಾಸ್ ವೇಷಧಾರಿ, ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗೂ ಗಾಯನ ವೃಂದವರು ಮನೆಗಳಿಗೆ ತೆರಳಿ ಪ್ರಾರ್ಥಿಸಿ, ಕ್ರಿಸ್ತರ ಶುಭಸಂದೇಶವನ್ನು ವಾಚಿಸಿ, ಗುರುಗಳು ಮನೆಯ ಮಂದಿಗೆ ಆಶೀರ್ವಚಿಸಿ ಶುಭಾಶಯ ಕೋರುತ್ತಾರೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಡಿಸೆಂಬರ್ ಬಂತೆಂದರೆ ವಿಶ್ವಾದ್ಯಂತ ಕ್ರೈಸ್ತ ಧರ್ಮೀಯರಿಗೆ ಹಬ್ಬದ ಖುಷಿ. ಈ ತಿಂಗಳಲ್ಲಿ ಯೇಸು ಕ್ರಿಸ್ತನ ಜನನವಾಗಿದ್ದು, ಆ ಹಿನ್ನೆಲೆಯಲ್ಲಿ ಡಿ.24ರಿಂದ ಜ.1ರ ವರೆಗೆ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರೈಸ್ತ ಬಾಂಧವರು ತಮ್ಮ ಇತರೆ ಹಬ್ಬಗಳಿಗಿಂತ ಹೆಚ್ಚು ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಿಸುತ್ತಾರೆ.ಡಿಸೆಂಬರ್ ಮೊದಲ ದಿನದಂದೇ ಮನೆಗಳಲ್ಲಿ ನಕ್ಷತ್ರವನ್ನು ತೂಗಿಸುವ ಮೂಲಕ ಹಬ್ಬದ ಸಿದ್ಧತೆಯಲ್ಲಿ ಸಮಾಜ ಬಾಂಧವರು ತೊಡಗಿಸಿಕೊಳ್ಳುತ್ತಾರೆ.
ಈ ಹಬ್ಬದ ಸಮಯದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಕ್ಯಾರೋಲ್ಸ್. ಅಂದರೆ ಕ್ರೈಸ್ತ ಧರ್ಮಕೇಂದ್ರಗಳಿಂದ ಮನೆ ಮನೆಗಳಿಗೆ ತೆರಳಿ ಕ್ರಿಸ್ತರ ಸಂದೇಶ ನೀಡುವುದು. ಕ್ಯಾರೋಲ್ಸ್ ಅಂಗವಾಗಿ ಸಾಂತಕ್ಲಾಸ್ ವೇಷಧಾರಿ, ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗೂ ಗಾಯನ ವೃಂದವರು ಮನೆಗಳಿಗೆ ತೆರಳಿ ಪ್ರಾರ್ಥಿಸಿ, ಕ್ರಿಸ್ತರ ಶುಭಸಂದೇಶವನ್ನು ವಾಚಿಸಿ, ಗುರುಗಳು ಮನೆಯ ಮಂದಿಗೆ ಆಶೀರ್ವಚಿಸಿ ಶುಭಾಶಯ ಕೋರುತ್ತಾರೆ ಹಾಗೂ ಹಬ್ಬದಲ್ಲಿ ಸಂಭ್ರಮದಿಂದ ತೊಡಗಿಸಿಕೊಳ್ಳುವಂತೆ ಕರೆ ನೀಡುತ್ತಾರೆ.ಜತೆಗೆ ಕ್ರೈಸ್ತ ಬಾಂಧವರು ಡಿಸೆಂಬರ್ ಮಾಸದಲ್ಲಿ ಮನೆಗಳಿಗೆ ಸುಣ್ಣ ಬಣ್ಣ ಬಳಿದು, ವಿವಿಧ ಬಗೆಯ ನಕ್ಷತ್ರಗಳನ್ನು ಮನೆಯ ಮೇಲ್ಛಾವಣಿಗಳ ಮೇಲೆ ಅಳವಡಿಸುತ್ತಾರೆ. ಮನೆಗಳಲ್ಲಿ ಕ್ರಿಸ್ತನ ಜನನದ ಸ್ಥಳವಾದ ಗೋದಲಿ (ದನದ ಕೊಟ್ಟಿಗೆ) ನಿರ್ಮಾಣ ಮಾಡಲಾಗುತ್ತದೆ. ಮಹಿಳೆಯರು ವಿವಿಧ ಬಗೆ ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ.ಕ್ರಿಸ್ತರ ಜನನದ ಹಬ್ಬವನ್ನು ಸಡಗರ, ಸಂಭ್ರಮದಲ್ಲಿ ಆಚರಿಸಲು ವಿಶ್ವವೇ ಅಣಿಗೊಳ್ಳುತ್ತಿದೆ. ಅದೇ ರೀತಿ ಸುಂಟಿಕೊಪ್ಪದ ಚರ್ಚ್‌ಗಳಲ್ಲೂ ಧರ್ಮಗರುಗಳು, ಸಮಾಜ ಬಾಂಧವರು ಭರದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ರೇ.ಫಾ.ವಿಜಯಕುಮಾರ್, ಸಾಂತಕ್ಲಾಸ್ ವೇಷಾಧಾರಿ, ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರು, ದೇವಾಲಯದ ಪಾಲನಾ ಸಮಿತಿ ಪದಾಧಿಕಾರಿಗಳು, ಯುವಕ ಯುವತಿಯುರು ಹಾಗೂ ಚಿಕ್ಕಮಕ್ಕಳು ಮನೆಮನೆಗೆ ತೆರಳಿ ವಿಶೇಷ ಪ್ರಾರ್ಥನೆ, ಗಾಯನವನ್ನು ಹಾಡುತ್ತಾ ಶುಭ ಸಂದೇಶವನ್ನು ವಾಚಿಸಿ ಕ್ರಿಸ್ತರ ಜನನದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.