ಸಾರಾಂಶ
ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಹಾಗೂ ನಿಸರ್ಗ ಇಕೋಕ್ಲಬ್ ಸಂಚಾಲಕಿ ಪದ್ಮಾವತಿ ವಿಶ್ವಪರಿಸರ ದಿನಾಚರಣೆಯ -೨೦೨೪ ರ ಘೋಷವಾಕ್ಯವಾದ ‘ಭುಮಿಯ ಪುನರುತ್ಥಾನ ಹಾಗೂ ಮರುಭೂಮಿ ತಡೆಗಟುವಿಕೆ’ ಬಗ್ಗೆ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಶ್ರೀಲತಾ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಪರಿಸರದ ಮೇಲೆ ಆಗುತ್ತಿರುವ ಅಪಾಯಕಾರಿ ಚಟುವಟಿಕೆಗಳ ಕುರಿತು ಮಾಹಿತಿಯನ್ನು ನೀಡಿದರು. ಪರಿಸರ ಸಂರಕ್ಷಣೆಯು ನಮ್ಮೆಲ್ಲಾರ ಆದ್ಯಕರ್ತವ್ಯವಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಪರಿಸರ ಮಾಲಿನ್ಯ ಉಂಟು ಮಾಡುವ ಯಾವುದೇ ಕೆಲಸದಲ್ಲಿ ವಿದ್ಯಾರ್ಥಿಗಳು ತೊಡಗಬಾರದೆಂದರು.
ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಹಾಗೂ ನಿಸರ್ಗ ಇಕೋಕ್ಲಬ್ ಸಂಚಾಲಕಿ ಪದ್ಮಾವತಿ ಮಾತನಾಡಿ, ವಿಶ್ವಪರಿಸರ ದಿನಾಚರಣೆಯ -೨೦೨೪ ರ ಘೋಷವಾಕ್ಯವಾದ ‘ಭುಮಿಯ ಪುನರುತ್ಥಾನ ಹಾಗೂ ಮರುಭೂಮಿ ತಡೆಗಟುವಿಕೆ’ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಅರಣ್ಯನಾಶದಿಂದಾಗಿ ಭೂಮಿ ಮರುಭೂಮಿಯಾಗುತ್ತಿರುವ ಬಗ್ಗೆ ಗಂಭೀರ ಸಮಸ್ಯೆಯ ಕುರಿತು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಎಚ್ಚರಿಕೆಯ ಸಂದೇಶ ನೀಡಿದರು.ನದಿಮೂಲ ಜಲಮೂಲಗಳು ಬರಿದಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ನಾಶದಿಂದಾಗಿ ಪ್ರಸ್ತುತವಾಗಿ ತಾಪಮಾನವು ದಿನದಿಂದ ದಿನಕ್ಕೆ ಏರುತ್ತಿರುವುದು ಜೀವಸಂಕುಲದ ಉಳಿಯುವಿಕೆಗೆ ಮಾರಕ ಎಂದರು.
ಕಾಲೇಜಿನ ಉಪನ್ಯಾಸಕಿಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.