ಕ್ರೈಸ್ತ ಬಾಂಧವರ ಪವಿತ್ರ ವಾರದ ಸಂಕೇತವಾಗಿ ಗರಿಗಳ ಭಾನುವಾರದ ಅಂಗವಾಗಿ ಸಂತ ಮೇರಿ ಶಾಲಾ ಆವರಣದಲ್ಲಿ ತೆಂಗಿನ ಗರಿಗಳನ್ನು ಆರ್ಶಿವಚಿಸಿ ಭಕ್ತರಿಗೆ ವಿತರಿಸುವ ಮೂಲಕ ಸಂತ ಅಂತೋಣಿಯವರ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕ್ರೈಸ್ತ ಬಾಂಧವರ ಪವಿತ್ರ ವಾರದ ಸಂಕೇತವಾಗಿ ಗರಿಗಳ ಭಾನುವಾರದ ಅಂಗವಾಗಿ ಸಂತ ಮೇರಿ ಶಾಲಾ ಆವರಣದಲ್ಲಿ ತೆಂಗಿನ ಗರಿಗಳನ್ನು ಆರ್ಶಿವಚಿಸಿ ಭಕ್ತರಿಗೆ ವಿತರಿಸುವ ಮೂಲಕ ಸಂತ ಅಂತೋಣಿಯವರ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯಾಧ್ಯಂತ ಕ್ರೈಸ್ತ ದೇವಾಲಯಗಳಲ್ಲಿ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬೈಬಲ್ ಶುಭ ಸಂದೇಶದಲ್ಲಿರುವಂತೆ ಯೇಸು ಕ್ರಿಸ್ತರನ್ನು ರಾಜಾಧಿ ರಾಜರಾಗಿ ಘೋಷಿಸಿ ಮೆರವಣಿಗೆ ನಡೆಸಿದ ಸ್ಮರಣೆಯ ಅಂಗವಾಗಿ ಗರಿಗಳನ್ನು ಆರ್ಶಿವಚಿಸಿ ಭಕ್ತಾಧಿಗಳಿಗೆ ನೀಡುವುದು ಆಚರಣೆಯ ಅಂಗವಾಗಿದೆ.ಕ್ರೈಸ್ತ ಬಾಂಧವರು 40 ದಿನಗಳ ಕಾಲ ಉಪವಾಸ ಮತ್ತು ಭಕ್ಷ್ಯ ಭೋಜನಗಳನ್ನು ತ್ಯಜಿಸುವ ಮೂಲಕ ಪ್ರಾರ್ಥನೆ, ವಿಶೇಷ ಧ್ಯಾನಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಪ್ರಭು ಕ್ರಿಸ್ತರು ದೈವಿ ಸ್ವರೂಪವನ್ನು ತೊರೆದು ಭುವಿಯಲ್ಲಿ ಮಾನವರಾಗಿ ಜನಸಿ ಜೀವಿಸಿ ಶಾಂತಿ, ಪ್ರೀತಿ, ಸಹನೆ, ಪರರು ಎಸಗುವ ತಪ್ಪುಗಳನ್ನು ಕ್ಷಮಿಸುವುದರೊಂದಿಗೆ ಮಾನವರು ಭುವಿಯಲ್ಲಿ ತಮ್ಮ ನೆರೆ ಹೊರೆಯವರನ್ನು ಪ್ರೀತಿಸುವ ಮತ್ತು ಕ್ಷಮಾ ಗುಣವನ್ನು ಭೋದಿಸಿದರು. ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೇ.ಫಾ. ವಿಜಯ ಕುಮಾರ್ ಅವರು ಸಂತ ಮೇರಿ ಶಾಲಾ ಆವರಣದಲ್ಲಿ ತೆಂಗಿನ ಗರಿಗಳನ್ನು ಆರ್ಶಿವಚಿಸಿ ನಂತರ ಕ್ರೈಸ್ತ ಬಾಂಧವರಿಗೆ ವಿತರಿಸಿದರು. ನಂತರ ಶಾಲಾ ಆವರಣದಿಂದ ದೇವಾಲಯದವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಭಕ್ತಾಧಿಗಳು ದೇವಾಲಯದಲ್ಲಿ ವಿಶೇಷ ಗಾಯನ, ಬಲಿಪೂಜೆ ಹಾಗೂ ಪ್ರಭೋದನೆಯನ್ನು ಆರ್ಪಿಸಿದರು. ಇದರೊಂದಿಗೆ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು. ಈ ಸಂದರ್ಭ ಸಂತ ಕ್ಲಾರ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಗರಿಗಳ ಭಾನುವಾರದ ಬಲಿಪೂಜೆ, ಪ್ರಬೋದನೆ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.