ಸಾರಾಂಶ
ವಿವಿಧ ದೇವಾಲಯಗಳಲ್ಲಿ ಹಬ್ಬವನ್ನು ಆಚರಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ವಿವಿಧ ದೇವಾಲಯಗಳಲ್ಲಿ ಶ್ರಾವಣ ಮಾಸದ ಹುಣ್ಣಿಮೆಯ ದಿನವಾದ ಶುಕ್ರವಾರ ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು.ಸುಂಟಿಕೊಪ್ಪದ ಶ್ರೀ ಕೋದಂಡ ಶ್ರೀ ರಾಮ ಮಂದಿರದಲ್ಲಿ ರಾತ್ರಿ ಹೆಂಗೆಳೆಯರು ನೂರಾರು ಸಂಖ್ಯೆಯಲ್ಲಿ ನೆರೆದಿದ್ದು, ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸುವ ಮೂಲಕ ದೇವಾಲಯದಲ್ಲಿ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ನೆರವೇರಿತು. ಹೋಬಳಿ ವ್ಯಾಪ್ತಿಯಲ್ಲಿ ಹಲವು ಮನೆಗಳಲ್ಲಿ ಮುತ್ತೈದೆಯರು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿದರು. ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟರು. ಮಡಿಯಲ್ಲಿ ದೇವರಿಗೆ ನೈವೇದ್ಯವನ್ನು ತಯಾರಿಸಿ ಕಳಸ ಇಟ್ಟು ದ್ರಾಕ್ಷಿ ಹಾಕಿ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಳಸವನ್ನು ಇಟ್ಟು ಮಾವಿನ ಎಲೆ ಹಾಗೂ ವೀಳ್ಯದೆಲೆಯನ್ನು ಕಳಸದ ಸುತ್ತ ಜೋಡಿಸಿ ಅದರ ಮೇಲೆ ಅರಸಿನ ಹಚ್ಚಿ ತೆಂಗಿನಕಾಯಿ ಇಟ್ಟು ಅಲಂಕರಿಸಿದರು. ಒಡವೆ, ಹಣದಿಂದ ಸಿಂಗರಿಸಿ ಪೂಜೆಯನ್ನು ನೆರವೇರಿಸುವ ಮೂಲಕ ಹಬ್ಬಕ್ಕೆ ಇನ್ನಷ್ಟು ಕಳೆ ತುಂಬಿದರು. ನೆರೆಹೊರೆಯವರಿಗೆ ಅರಶಿನ, ಕುಂಕುಮ, ಹೂ, ಬಳೆ ನೀಡಿ ಪ್ರಸಾದವನ್ನು ನೀಡುವುದರ ಜೊತೆಯಲ್ಲಿ ಕೆಲವು ಮನೆಗಳಲ್ಲಿ ಅನ್ನದಾನದ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿತ್ತು.ನಾಕೂರು ಶಿರಂಗಾಲ, ಹರದೂರು, ಕೆದಕಲ್, ಕೊಡಗರಹಳ್ಳಿ, ಕಂಬಿಬಾಣೆ ಇನ್ನಿತರ ಕಡೆಗಳಲ್ಲಿ ದೇವಾಲಯ ಮತ್ತು ಮನೆಗಳಲ್ಲಿ ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.