ಹಿರಿಯೂರು ಕ್ಷೇತ್ರದಲ್ಲಿಯೂ ಸೂಪರ್ ಮಿನಿಸ್ಟರ್ ! ಡಿಸಿ ಕಚೇರಿ ಸಭೆಯಲ್ಲಿ ಇತರೆ ವ್ಯಕ್ತಿಯ ಅಧಿಕಾರ

| Published : Jul 30 2024, 01:37 AM IST / Updated: Jul 30 2024, 09:39 AM IST

ಸಾರಾಂಶ

ಚಿತ್ರದುರ್ಗ  ಶಾಸಕಗಿರಿಯ ದರ್ಬಾರನ್ನು ಸಹೋದರ, ಸಹೋದರಿಯರು ನಡೆಸುತ್ತಿದ್ದ ಪರಿ ಇದೀಗ ಹಿರಿಯೂರಿಗೂ ವಿಸ್ತರಣೆ ಆದಂತೆ ಕಾಣಿಸುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾ.ಹೆ ಭೂ ಸ್ವಾದೀನದ ಸಭೆ ಇಂತಹದ್ದೊಂದು ಸಂದೇಶವ ರವಾನಿಸಿತು.  

 ಚಿಕ್ಕಪ್ಪನಹಳ್ಳಿ ಷಣ್ಮುಖ

 ಚಿತ್ರದುರ್ಗ :  ಚಿತ್ರದುರ್ಗ ಕ್ಷೇತ್ರದ ಶಾಸಕಗಿರಿಯ ದರ್ಬಾರನ್ನು ಸಹೋದರ, ಸಹೋದರಿಯರು ನಡೆಸುತ್ತಿದ್ದ ಪರಿ ಇದೀಗ ಹಿರಿಯೂರಿಗೂ ವಿಸ್ತರಣೆ ಆದಂತೆ ಕಾಣಿಸುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾ.ಹೆ ಭೂ ಸ್ವಾದೀನದ ಸಭೆ ಇಂತಹದ್ದೊಂದು ಸಂದೇಶವ ರವಾನಿಸಿತು. ಕಂದಿಕೆರೆ ಜಗದೀಶ್ ಎಂಬಾತ ಸಭೆ ನಿರ್ವಹಿಸಿ ಅಚ್ಚರಿ ಮೂಡಿಸಿದ್ದಾನೆ.

ಜಿಲ್ಲಾ ಉಸ್ತುವಾರಿ ಸಚಿವರು ಪ್ರಮುಖ ಸಭೆ ನಡೆಸುತ್ತಿದ್ದಾರೆ ಎಂದರೆ ಅಲ್ಲಿ ಅಧಿಕಾರಿಗಳಿಗೆ ಮಾತ್ರ ಅವಕಾಶ ವಿರುತ್ತದೆ. ಉಳಿದವರು ವೀಕ್ಷರಾಗಬೇಕಷ್ಟೇ. ಹಿರಿಯೂರು ಮೂಲಕ ಹಾದು ಹೋಗುವ ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150ರ ಭೂ ಸ್ವಾಧೀನ ಪ್ರಕರಣದ ಸಭೆ ಅದಾಗಿದ್ದು ಜಿಲ್ಲಾಧಿಕಾರಿಗಳು ಭೂ ಸ್ವಾಧೀನ ಅಧಿಕಾರಿಗಳು ಹಾಗೂ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತ ಪಿಎನ್ ಸಿ ಕಂಪನಿ ಅಧಿಕಾರಿಗಳ ಕರೆಯಿಸಿದ್ದರು. ರೈತರ ಆಕ್ಷೇಪಣೆ ಸೇರಿದಂತೆ ಪ್ರಮುಖ ಗಂಭೀರ ವಿಷಯಗಳ ಚರ್ಚಿಸುವ ಸಭೆ ಅದಾಗಿತ್ತು.

ಒಂದಿಷ್ಟು ಕಡತಗಳ ಮುಂದೆ ಹರವಿಕೊಂಡ ವ್ಯಕ್ತಿ, ಭೂಸ್ವಾಧೀನ ಅಧಿಕಾರಿಗಳ ಪಕ್ಕ ಆಸೀನನಾಗಿದ್ದ. ಮಾಧ್ಯಮದವರು ಸೇರಿದಂತೆ ಕೆಲವರು ಆತನೆಲ್ಲೋ ಯಾವುದೋ ಇಲಾಖೆ ಅಧಿಕಾರಿ ಎಂದೇ ಭಾವಿಸಿದ್ದರು. ಸಭೆ ಆರಂಭವಾದ ತುಸು ಹೊತ್ತಿನಲ್ಲಿಯೇ ಆತ ಪಿಎನ್ ಸಿ ಕಂಪನಿ ಅಧಿಕಾರಿಗಳ ಮೇಲೆ ಹರಿಹಾಯ್ದ. ರೈತರಿಗೆ ಅನ್ಯಾಯ ಮಾಡಿದ್ದೀರಿ, ನಿಯಮಾವಳಿ ಉಲ್ಲಂಘಿಸಿದ್ದೀರಿ ಎಂದೆಲ್ಲ ಜೋರು ದನಿಯಲ್ಲಿ ಪ್ರಶ್ನಿಸಿದ. ಸಾಲದೆಂಬಂತೆ ಭೂ ಸ್ವಾಧೀನ ಅಧಿಕಾರಿಗಳ ಮೇಲೂ ಹರಿಹಾಯ್ದ. ಈತನ ಆರ್ಭಟಕ್ಕೆ ಸ್ವತ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬೆರಗು ಗಣ್ಣಿನಿಂದ ವೀಕ್ಷಿಸಿದರು.

ಮಾಧ್ಯಮದವರ ಜೊತೆ ಸಚಿವ ಡಿ.ಸುಧಾಕರ್ ಮಾತನಾಡುವಾಗಲೂ ಆತನ ಏರು ದನಿ ಅಡಗಿರಲಿಲ್ಲ. ಕುತೂಹಲದಿಂದ ಪತ್ರಕರ್ತರು ವಿಚಾರಿಸಿದಾಗ ಆತ ಅಧಿಕಾರಿಯಲ್ಲ, ಗ್ರಾ.ಪಂ. ಮಾಜಿ ಸದಸ್ಯ, ಸಚಿವ ಸುಧಾಕರ್ ಅವರ ಅನುಯಾಯಿ ಎಂಬ ವಿಷಯ ಬಹಿರಂಗವಾಯಿತು. ಆತ ಸಚಿವರ ಅನುಯಾಯಿಯಾಗಿರಲಿ, ಯಾರ ಅಭ್ಯಂತರವಿಲ್ಲ. ಆದರೆ, ಡಿಸಿ ಕಚೇರಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಹಿಡಿತ ಸಾಧಿಸಿ ಅಭಿಪ್ರಾಯ ಮಂಡಿಸುವ ಅಧಿಕಾರ ಯಾರು ಕೊಟ್ಟರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ಸಭೆಯ ನಂತರ ಅಧಿಕಾರಿ ವಲಯದಲ್ಲಿ ಆಘಾತಕಾರಿ ಸಂಗತಿಯೊಂದು ಅಂತರ್ಮುಖಿಯಾಗಿ ಹರಿಯಿತು. ಯಾರೊಬ್ಬರೂ ಬಹಿರಂಗವಾಗಿ ಏನೂ ಹೇಳಿಕೊಳ್ಳದ ಪರಿಸ್ಥಿತಿಯಲ್ಲಿದ್ದರು. ಅಷ್ಟರ ಮಟ್ಟಿಗೆ ಭೀತಿ ಆವರಿಸಿತ್ತು. ಹಿರಿಯೂರು ತಾಲೂಕಿನ ಇಡೀ ಆಡಳಿತವ ಸಚಿವ ಡಿ.ಸುಧಾಕರ್ ಪರವಾಗಿ ಆತ ನಿರ್ವಹಿಸುತ್ತಾನಂತೆ. ಈತನಿಗೆ ಸಲಾಮು ಹೊಡೆದುಕೊಂಡಿರಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಹಾಗಾಗಿ ಎಲ್ಲ ಸಭೆಗಳಿಗೂ ಆತ ಎಂಟ್ರಿ ಕೊಟ್ಟು ಮಧ್ಯೆ ಮೂಗು ತೂರಿಸಿ ಅಧಿಕಾರಿಗಳ ತರಾಟೆ ತೆಗೆದುಕೊಳ್ಳುವ ಕೆಲಸ ಮಾಡುತ್ತಾನೆ ಎಂಬುದು ಅಧಿಕಾರಿಯಷ್ಟೇ ಅಲ್ಲ, ಹಿರಿಯೂರು ಕಾಂಗ್ರೆಸ್ ವಲಯದಲ್ಲಿಯೂ ಮಾರ್ದನಿಸುತ್ತಿದೆ. ಇಂತಹವರೆನ್ನೆಲ್ಲ ಕೂರಿಸಿಕೊಂಡು ಜಿಲ್ಲಾಧಿಕಾರಿಗಳೇಕೆ ಮೀಟಿಂಗ್ ಮಾಡಿದರು ಎಂಬುದೇ ಯಕ್ಷ ಪ್ರಶ್ನೆ.

ವಿಳಂಬ ಧೋರಣೆ ಸಲ್ಲ: ಇದಕ್ಕೂ ಮುನ್ನ ಸಚಿವ ಡಿ.ಸುಧಾಕರ್, ಜಿಲ್ಲೆಯಲ್ಲಿ ಹಾದುಹೋಗಿರುವ ಬೀದರ್-ಶ್ರೀರಂಗಪಟ್ಟಣ ರಾಷ್ಟಿಯ ಹೆದ್ದಾರಿ-150ರಲ್ಲಿನ ರಸ್ತೆ ಅಡಚಣೆ, ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.

ಸರ್ಕಾರಿ ಜಮೀನನ್ನು ಅಕ್ರಮವಾಗಿ ಬೇರೆಯವರ ಹೆಸರಿನಲ್ಲಿ ಇ-ಸ್ವತ್ತು ಮಾಡಿ, ರಾಷ್ಟ್ರೀಯ ಹೆದ್ದಾರಿಗಾಗಿ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ, ಭೂಸ್ವಾಧೀನದ ಪರಿಹಾರ ಮೊತ್ತವನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ಪಾವತಿಸಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಅಲ್ಲದೆ ಕಂಪನಿಯವರು ರಸ್ತೆ ನಿರ್ಮಾಣಕ್ಕಾಗಿ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮ ಗ್ರಾವಲ್ ಮಣ್ಣು ಎತ್ತಿ, ಇದಕ್ಕೆ ಯಾವುದೇ ರಾಜಧನ ಪಾವತಿಸದೇ ಇರುವ ಬಗ್ಗೆಯೂ ದೂರುಗಳು ಬಂದಿವೆ. ಯಾರೇ ತಪ್ಪು ಮಾಡಿದ್ದರೂ ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಿ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದವರ ವಿರುದ್ಧ ನಿಯಮಾನುಸಾರ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ-150ರ ರಸ್ತೆ ಕಾಮಗಾರಿಯಲ್ಲಿನ ನ್ಯೂನತೆಯನ್ನು ಸರಿಪಡಿಸಬೇಕು ಹಾಗೂ ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಿ ಎರಡು ತಿಂಗಳೊಳಗೆ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ-150ರ ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸ್, ಪಿಎನ್‌ಸಿ ಕಂಪನಿಯ ಪ್ರತಿನಿಧಿಗಳು ಇದ್ದರು.