ತರಕಾರಿ ವ್ಯಾಪಾರಿಯೊಬ್ಬರಿಂದ ₹20 ಲಕ್ಷ ಮೌಲ್ಯದ ಮೂರು ಲೋಡ್‌ ಟೊಮೆಟೋ ಪಡೆದು ಬಿಳಿ ಹಾಳೆ ನೀಡಿ ವಂಚನೆ

| Published : Jul 30 2024, 01:36 AM IST / Updated: Jul 30 2024, 08:30 AM IST

ತರಕಾರಿ ವ್ಯಾಪಾರಿಯೊಬ್ಬರಿಂದ ₹20 ಲಕ್ಷ ಮೌಲ್ಯದ ಮೂರು ಲೋಡ್‌ ಟೊಮೆಟೋ ಪಡೆದು ಬಿಳಿ ಹಾಳೆ ನೀಡಿ ವಂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ತರಕಾರಿ ವ್ಯಾಪಾರಿಯೊಬ್ಬರಿಂದ ₹20 ಲಕ್ಷ ಮೌಲ್ಯದ ಮೂರು ಲೋಡ್‌ ಟೊಮೆಟೋ ಪಡೆದುಕೊಂಡು ಬಳಿಕ ಹಣವೆಂದು ಬಿಳಿ ಹಾಳೆಗಳ ಕಟ್ಟುಗಳನ್ನು ನೀಡಿ ವಂಚಿಸಿದ ಆರೋಪದಡಿ ಇಬ್ಬರು ವ್ಯಕ್ತಿಗಳ ವಿರುದ್ಧ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 ಬೆಂಗಳೂರು : ತರಕಾರಿ ವ್ಯಾಪಾರಿಯೊಬ್ಬರಿಂದ ₹20 ಲಕ್ಷ ಮೌಲ್ಯದ ಮೂರು ಲೋಡ್‌ ಟೊಮೆಟೋ ಪಡೆದುಕೊಂಡು ಬಳಿಕ ಹಣವೆಂದು ಬಿಳಿ ಹಾಳೆಗಳ ಕಟ್ಟುಗಳನ್ನು ನೀಡಿ ವಂಚಿಸಿದ ಆರೋಪದಡಿ ಇಬ್ಬರು ವ್ಯಕ್ತಿಗಳ ವಿರುದ್ಧ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಲಾರದ ತರಕಾರಿ ವ್ಯಾಪಾರಿ ಆದಿತ್ಯ ಷಾ ಎಂಬುವವರು ನೀಡಿದ ದೂರಿನ ಮೇರೆಗೆ ಜಿ.ಸಂಜಯ್‌ ಮತ್ತು ಜಿ.ಮುಖೇಶ್‌ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ದೂರುದಾರ ಆದಿತ್ಯ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ತಮ್ಮ ದೊಡ್ಡಪ್ಪನ ಹೆಸರಿನಲ್ಲಿ ಟ್ರೇಡಿಂಗ್‌ ಲೈಸೆನ್ಸ್‌ ಪಡೆದು ತರಕಾರಿ ವ್ಯವಹಾರ ಮಾಡುತ್ತಿದ್ದಾರೆ. ಕೋಲಾರ ಎಪಿಎಂಸಿಯಲ್ಲಿ ರೈತರಿಂದ ತರಕಾರಿಗಳನ್ನು ಖರೀದಿಸಿ ಪಶ್ಚಿಮ ಬಂಗಾಳ ಸಿಲಿಗುರಿ ಎಪಿಎಂಸಿ ಮಾರುಕಟ್ಟೆಗೆ ರವಾನಿಸುತ್ತಾರೆ. ಅಲ್ಲಿನ ಟ್ರೇಡರ್‌ಗಳು ತರಕಾರಿ ಸ್ವೀಕರಿಸಿ ಬಳಿಕ ಬ್ಯಾಂಕ್‌ ಅಥವಾ ಬೆಂಗಳೂರಿನಲ್ಲಿ ಅವರ ಪರಿಚಿತ ವ್ಯಾಪಾರಿಗಳ ಮುಖಾಂತರ ನಗದು ರೂಪದಲ್ಲಿ ಹಣ ಕೊಡುತ್ತಾರೆ.

ಸಿಲಿಗುರಿಗೆ 3 ಲೋಡ್‌ ಟೊಮೆಟೋ:

ಅದರಂತೆ ಜು.10ರಂದು ಮುಖೇಶ್‌ ಎಂಬಾತ ಪಶ್ಚಿಮ ಬಂಗಾಳದ ಸಿಲಿಗಿರಿಗೆ ಮೂರು ಲೋಡ್‌ ಟೊಮೆಟೋ ಕಳುಹಿಸುವಂತೆ ಆದಿತ್ಯಗೆ ಕರೆ ಮಾಡಿ ಕೇಳಿದ್ದಾನೆ. ಅದರಂತೆ ಆದಿತ್ಯ ಕೋಲಾರದಿಂದ ಮೂರು ಲೋಡ್‌ ಟೊಮೆಟೋವನ್ನು ಸಿಲಿಗುರಿಗೆ ಕಳುಹಿಸಿದ್ದಾರೆ. ಟೊಮೆಟೋ ಸ್ವೀಕರಿಸಿದ ಬಳಿಕ ಮುಖೇಶ್‌, ಆದಿತ್ಯನ ದೊಡ್ಡಪ್ಪನಿಗೆ ಕರೆ ಮಾಡಿ ಬೆಂಗಳೂರಿನ ಸಂಜಯ್‌ ಎಂಬುವವರ ಮುಖಾಂತರ ನಿಮಗೆ ಹಣ ಕಳುಹಿಸಿದ್ದೇನೆ. ಅವರು ವೈಟ್‌ಫೀಲ್ಡ್‌ನ ಹಗದೂರಿನ ಬೇಕರಿ ಬಳಿ ಹಣ ನೀಡುತ್ತಾರೆ ಎಂದು ತಿಳಿಸಿದ್ದಾನೆ.

ಹಣವೆಂದು ಬಿಳಿ ಹಾಳೆಗಳ ಬಂಡಲ್‌ ನೀಡಿದ:

ಅದರಂತೆ ಆದಿತ್ಯ ಜು.15ರಂದು ಮಧ್ಯಾಹ್ನ ಹಗದೂರಿನ ಬೇಕರಿ ಬಳಿ ಸಂಜಯ್‌ನನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಂಜಯ್‌ ₹20 ಲಕ್ಷ ಇದೆ ಎಂದು ₹500 ಮುಖಬೆಲೆಯ ಆಕ್ಸಿಸ್‌ ಬ್ಯಾಂಕ್‌ನ ಚೀಟಿಯಿದ್ದ ಹಣದ ನಾಲ್ಕು ಪೊಟ್ಟಣಗಳನ್ನು ಆದಿತ್ಯಗೆ ನೀಡಿದ್ದಾನೆ. ಬೇಕರಿ ಬಳಿ ಸಾಕಷ್ಟು ಜನರು ಇದ್ದ ಹಿನ್ನೆಲೆಯಲ್ಲಿ ಹಣದ ಪೊಟ್ಟಗಳನ್ನು ಬಿಚ್ಚಿ ಪರಿಶೀಲಿಸದೆ ಆ ಹಣದೊಂದಿಗೆ ಆದಿತ್ಯ ಕೋಲಾರಕ್ಕೆ ತೆರಳಿದ್ದಾರೆ.

ಒಂದು ಕಟ್ಟಿನಲ್ಲಿ

ಒಂದೇ ಅಸಲಿ!

ಆದಿತ್ಯ ಮತ್ತು ಅವರ ದೊಡ್ಡಪ್ಪ ಹಣದ ಪೊಟ್ಟಣಗಳನ್ನು ಬಿಚ್ಚಿ ನೋಡಿದಾಗ ₹500 ಮುಖಬೆಲೆಯ ನೋಟಿನ 10 ಕಟ್ಟುಗಳು ಕಂಡು ಬಂದಿವೆ. ಈ ಪೈಕಿ ಒಂದು ಕಟ್ಟುನ್ನು ಬಿಚ್ಚಿ ನೋಡಿದಾಗ ಕಟ್ಟಿನ ಮೇಲೆ ₹500 ಮುಖಬೆಲೆಯ ಅಸಲಿ ನೋಟು ಇರಿಸಿ, ಒಳಗೆ ಬಳಿ ಹಾಳೆಗಳು ಇರುವುದು ಕಂಡು ಬಂದಿದೆ. ತಕ್ಷಣ ಮುಖೇಶ್‌ ಮತ್ತು ಸಂಜಯ್‌ಗೆ ಕರೆ ಮಾಡಿದಾಗ ಇಬ್ಬರ ಮೊಬೈಲ್‌ಗಳು ಸ್ವಿಚ್ಡ್‌ ಆಫ್‌ ಬಂದಿದೆ. ಈ ವೇಳೆ ಆದಿತ್ಯಗೆ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.

₹32 ಲಕ್ಷ ವಂಚನೆ ಆರೋಪ

ಆದಿತ್ಯ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಮುಖೇಶ್‌ ಮತ್ತು ಸಂಜಯ್‌ ಮೂರು ಲೋಡ್‌ ಟೊಮೆಟೋ ಪಡೆದು ಬಿಳಿ ಪೇಪರ್‌ ಕಟ್ಟುಗಳನ್ನೇ ಹಣವೆಂದು ನಂಬಿಸಿ ವಂಚನೆ ಮಾಡಿದ್ದಾರೆ. ಮೂರು ಲೋಡ್‌ ಟೊಮೆಟೋಗೆ ₹20 ಲಕ್ಷ ಹಾಗೂ ಬಾಕಿ ₹12 ಲಕ್ಷ ಸೇರಿ ಒಟ್ಟು ₹32 ಲಕ್ಷ ವಂಚಿಸಿರುವ ಈ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.