ಹಾವೇರಿ ಮೆಡಿಕಲ್ ಕಾಲೇಜ್ ಆವರಣದಲ್ಲೇ 300 ಬೆಡ್‌ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಹಾವೇರಿ: ಜಿಲ್ಲೆಯ ಜನರು ಆರೋಗ್ಯ ಸಮಸ್ಯೆ ಎದುರಾದರೆ ಹುಬ್ಬಳ್ಳಿ, ದಾವಣಗೆರೆಗೆ ಹೋಗುತ್ತಿದ್ದರು. ಇದನ್ನು ತಪ್ಪಿಸಲು ಮೆಡಿಕಲ್ ಕಾಲೇಜ್ ಸ್ಥಾಪಿಸಬೇಕೆಂಬ ಆಶಯಕ್ಕೆ ಸಂಸದರು, ಶಾಸಕರು ಸಹಕಾರ ನೀಡಿದ್ದು, ಈ ಮೆಡಿಕಲ್ ಕಾಲೇಜ್ ಆವರಣದಲ್ಲೇ 300 ಬೆಡ್‌ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಇಲ್ಲಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ಆನಂತರ ಹಾವೇರಿಯಲ್ಲೇ ಮೊದಲ ಕೆಡಿಪಿ ಸಭೆ ನಡೆಸಿದ್ದರು. ಈಗ ಹೆಚ್ಚು ಅವಧಿಯ ಸಿಎಂ ಆದ ಬಳಿಕ ಮೊದಲ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿರುವುದು ವಿಶೇಷವಾಗಿದ್ದು, ಹಿಮ್ಸ್ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಇಲ್ಲಿಗೆ ಆದಷ್ಟು ಬೇಗ ಎಂಆರ್‌ಐ ಸ್ಕ್ಯಾನಿಂಗ್‌ ಯಂತ್ರ ಬರಲಿದೆ ಎಂದರು.

ಕೇಂದ್ರ ಸರ್ಕಾರ ಈ ಮೆಡಿಕಲ್ ಕಾಲೇಜ್‌ಗೆ ₹190 ಕೋಟಿಯಲ್ಲಿ ₹160 ಕೋಟಿ ಮಾತ್ರ ಕೊಟ್ಟಿದೆ. ಬಾಕಿ ಹಣ ಕೊಡಿಸಿ ಎಂದು ಸಂಸದ ಬೊಮ್ಮಾಯಿ ಅವರಿಗೆ ನಿವೇದನೆ ಮಾಡುತ್ತೇನೆ. ಡಿ.ಕೆ. ಶಿವಕುಮಾರ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಮಾಡುತ್ತಾರೆ. ನೀವು ನಿಮ್ಮದೇ ಸಂಸದರು, ಶಾಸಕರ ಮನವೊಲಿಸಿ. ನಾನು ರಾಜಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಹಾವೇರಿ ಜನರ ಅಭಿವೃದ್ಧಿ ದೃಷ್ಟಿಯಿಂದ ಹೇಳುತ್ತಿದ್ದೇನೆ ಎಂದರು.

₹1400 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಡೆಯುತ್ತಿದೆ. ₹120 ಕೋಟಿ ವೆಚ್ಚದಲ್ಲಿ ಹಾವೇರಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ ನಡೆಯುತ್ತಿದೆ. ಎಪಿಎಂಸಿ ಇಲಾಖೆಯಿಂದ ಎರಡು ಕೋಲ್ಡ್ ಸ್ಟೋರೇಜ್ ಕೊಟ್ಟಿದ್ದೇವೆ ಎಂದರು.

ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕಾನೂನು ಸಚಿವ ಎಚ್.ಕೆ. ಪಾಟೀಲ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಯಾಸೀರಖಾನ್ ಪಠಾಣ್, ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಹೆಸ್ಕಾಂ ಅಧ್ಯಕ್ಷ ಸೈಯದ ಅಜ್ಜಂಪೀರ ಖಾದ್ರಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕರಾದ ನೆಹರು ಓಲೇಕಾರ, ಬಿ.ಎಚ್. ಬನ್ನಿಕೋಡ, ಆರ್. ಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಗಲಿ, ಹುಡಾ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಎಂ.ಎಂ. ಹಿರೇಮಠ, ಎಂ.ಎಂ. ಮೈದೂರ, ಕೊಟ್ರೇಶಪ್ಪ ಬಸೇಗಣ್ಣಿ, ಆನಂದ ಗಡ್ಡದೇವರಮಠ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್‌ಪಿ ಯಶೋದಾ ವಂಟಗೋಡಿ, ಹೀಮ್ಸ್ ನಿರ್ದೇಶಕ ಡಾ. ಪ್ರದೀಪ ಕುಮಾರ, ಎಡಿಸಿ ನಾಗರಾಜ ಇತರರು ಇದ್ದರು. ನಾಗರಾಜ ನಡುವಿನಮಠ ಕಾರ್ಯಕ್ರಮ ನಿರ್ವಹಿಸಿದರು.ಎಲ್ಲ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು: ಬಡವರು, ಸಾಮಾನ್ಯ ಜನರಿಗೆ ಸರ್ಕಾರಿ ಮೆಡಿಕಲ್ ಕಾಲೇಜ್‌ನಿಂದ ಉತ್ತಮ ಚಿಕಿತ್ಸೆ ಲಭ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪಿಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಸದ್ಯ 22 ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳಿವೆ. ಕೂಲಿ ಕಾರ್ಮಿಕರು, ಬಡವರು, ರೈತರ ಮಕ್ಕಳೂ ಡಾಕ್ಟರ್ ಆಗಬೇಕಾದರೆ ಸರ್ಕಾರಿ ಮೆಡಿಕಲ್ ಕಾಲೇಜುಗಳಿಂದ ಮಾತ್ರ ಸಾಧ್ಯ. ಪ್ರತಿ ಜಿಲ್ಲೆಯಲ್ಲಿ ಒಂದು ಮೆಡಿಕಲ್ ಕಾಲೇಜ್, ಸೂಪರ್ ಸ್ಪೆಶಾಲಿಟಿ, ಟ್ರಾಮಾ ಸೆಂಟರ್ ಆರಂಭಿಸುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. 9 ಕಡೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲು ಸರ್ಕಾರ ಮುಂದಾಗಿದೆ. ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ. ಈ ವರ್ಷ 420 ಮೆಡಿಕಲ್, 421 ಪಿಜಿ ಸೀಟು ರಾಜ್ಯದಲ್ಲಿ ಹೆಚ್ಚಿಸಿದ್ದೇವೆ. ಅತಿಹೆಚ್ಚು ಮೆಡಿಕಲ್, ಪಿಜಿ ಸೀಟು ಹೊಂದಿದ ರಾಜ್ಯ ನಮ್ಮದಾಗಿದೆ ಎಂದು ಹೇಳಿದರು.ಒಳ್ಳೆಯ ರಸ್ತೆ ಮಾಡಿದ್ದೇವೆ: ನಮ್ಮ ರಾಜ್ಯದಲ್ಲಿ ಮಾತ್ರ ಎಲ್ಲ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳಿವೆ. ಬಡವರಿಗೆ ವೈದ್ಯಕೀಯ ಸೌಲಭ್ಯ ಕೊಡಲು ಮೆಡಿಕಲ್ ಕಾಲೇಜುಗಳಿಂದ ಸಾಧ್ಯ ಆಗುತ್ತಿದೆ. ಕಳೆದ 30 ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಮೂಲ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿದೆ. ಎಲ್ಲೆಡೆ ಒಳ್ಳೆಯ ರಸ್ತೆ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕೆಲಸಗಳನ್ನು ಮಾಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಐತಿಹಾಸಿಕ ಮಹತ್ವ: ಅರಸು ದಾಖಲೆ ದಾಟಿದ ಮೊದಲ ದಿನ ಹಾವೇರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಇಂದಿನಿಂದ ಸಿದ್ದರಾಮಯ್ಯ ಅವರ ಹೊಸ ಇನ್ನಿಂಗ್ಸ್ ಶುರುವಾಗಲಿದೆ. ಬಸವಣ್ಣನವರನ್ನು ಅಧಿಕೃತ ಸಾಂಸ್ಕೃತಿಕ ನಾಯಕವೆಂದು ಘೋಷಿಸಿದ್ದಾರೆ. ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಹಸಿವು ಮುಕ್ತ ರಾಜ್ಯವನ್ನಾಗಿಸಿದ್ದಾರೆ. ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದಲ್ಲಿ ಬಡತನವನ್ನು ಬೇರುಸಮೇತ ಕಿತ್ತು ಹಾಕಿದ್ದೇವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಮೆಡಿಕಲ್ ಕಾಲೇಜು ಲೋಕಾರ್ಪಣೆಯಾಗಿರುವುದು ಅತ್ಯಂತ ಖುಷಿಯ ಸಂಗತಿ. ಜನರ ಆರೋಗ್ಯದ ಹಿತದೃಷ್ಟಿಯಿಂದ ಮೆಡಿಕಲ್ ಕಾಲೇಜ್ ಆವರಣದಲ್ಲೇ 400 ಬೆಡ್‌ನ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಘೋಷಣೆ ಮಾಡಬೇಕು ಎಂದು ವಿಧಾನಸಭೆ ಉಪಾಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.