ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ

| Published : Jun 23 2024, 02:01 AM IST

ಸಾರಾಂಶ

ಬೆಳಗಾವಿ ನಗರದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿ ನೇಮಕ ಹಾಗೂ ವೈದ್ಯಕೀಯ ಉಪಕರಣ ಒದಗಿಸುವುದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದು, ಶೀಘ್ರ ಆಸ್ಪತ್ರೆ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿ ನೇಮಕ ಹಾಗೂ ವೈದ್ಯಕೀಯ ಉಪಕರಣ ಒದಗಿಸುವುದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದು, ಶೀಘ್ರ ಆಸ್ಪತ್ರೆ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಬೆಂಗಳೂರಿನ ವಿಕಾಸಸೌಧದಲ್ಲಿ ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರೊಂದಿಗೆ ಜಂಟಿಯಾಗಿ ಹಮ್ಮಿಕೊಂಡಿದ್ದ ಬೆಳಗಾವಿ ವೈದ್ಯಕೀಯ ‌ವಿಜ್ಞಾನ ಸಂಸ್ಥೆಯ (ಬಿಮ್ಸ್) ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಬಿಮ್ಸ್ ಆವರಣದಲ್ಲಿ ₹188 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ವರ್ಷಕ್ಕೆ ₹38 ಕೋಟಿ ಅನುದಾನ ಅವಶ್ಯಕತೆ ಇದ್ದು, ಸಿಎಂ ಸಿದ್ದರಾಮಯ್ಯನವರಿಂದ ಅನುಮೋದನೆ ಪಡೆಯಲಾಗುವುದು ಎಂದರು. ಈ ಆಸ್ಪತ್ರೆಗೆ ಅಗತ್ಯ ಇರುವ ಎ-ವೃಂದ, ಬಿ-ವೃಂದದ 570 ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನರವಿಜ್ಞಾನ, ನರಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಅಂತಃಸ್ರಾವಶಾಸ್ತ್ರ, ಗ್ಯಾಸ್ಟ್ರೋಎಂಟರಾಲಜಿ, ನೆಫ್ರಾಲಜಿ ಮತ್ತು ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಸೇರಿದಂತೆ ಇನ್ನಿತರೆ ಆರೋಗ್ಯ ಸೇವೆ ನೀಡಲು ತಜ್ಞ ವೈದ್ಯರ ಸೌಲಭ್ಯಗಳು ದೊರಕಲಿದ್ದು, ಈ ನೂತನ ಆಸ್ಪತ್ರೆಯಿಂದ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರೊಂದಿಗೆ ಚರ್ಚಿಸಿ ಬಿಮ್ಸ್ ಆವರಣದಲ್ಲಿ ನರ್ಸಿಂಗ್‌ ಹಾಸ್ಟೆಲ್‌, 450 ಹಾಸಿಗೆಯುಳ್ಳ ಬೋಧನಾ ಆಸ್ಪತ್ರೆ ಕಟ್ಟಡ ನಿರ್ಮಾಣದ ಕುರಿತಾಗಿ ಚರ್ಚೆ ನಡೆಸಿರುವುದಾಗಿ ತಿಳಿಸಿದ ಸಚಿವ ಸತೀಶ್‌, ಇದೇ ವೇಳೆ ಬೆಳಗಾವಿಯ ಬಿಮ್ಸ್ ಅಭಿವೃದ್ಧಿಗೆ ವೇಗ ನೀಡುವ ಮೂಲಕ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಬಿಮ್ಸ್ ನಿರ್ದೇಶಕ ಅಶೋಕ ಕುಮಾರ ಶೆಟ್ಟಿ ಹಾಗೂ ಮುಖ್ಯ ಆಡಳಿತ ಅಧಿಕಾರಿಗಳು ಡಾ.ಸಿದ್ದು ಹುಲ್ಲೋಳಿ ಸೇರಿದಂತೆ ವೈದ್ಯಕೀಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.