ಸಾರಾಂಶ
ಭಟ್ಕಳ: ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆ ಮತ್ತು ಅಂದಾಜು ಪತ್ರಿಕೆ ಸಿದ್ಧಪಡಿಸುವ ಕುರಿತು ತಾಲೂಕು ಮಟ್ಟದ ಇಲಾಖಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಡಾಟಾ ಎಂಟ್ರಿ ಆಪರೇಟರ್ ಹಾಗೂ ವಾಟರಮನ್‌ಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಮಾತನಾಡಿದ ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿ.ಡಿ. ಮೊಗೇರ, ಕುಡಿಯುವ ನೀರಿನ ಮೂಲಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸುವುದು ಹಾಗೂ ನೀರಿನ ಗುಣಮಟ್ಟ ಪರೀಕ್ಷಿಸಿ ಶುದ್ಧ ಕುಡಿಯುವ ಪೂರೈಸಲು ಅಗತ್ಯ ಕ್ರಮವಹಿಸಬೇಕು ಎಂದರು. ನೀರಿನ ಮೂಲದಿಂದ ಹರಡುವ ಸಾಂಕ್ರಾಮಿಕ ರೋಗಗಳ ದುಷ್ಪರಿಣಾಮಗಳು ಮತ್ತು ಮಾರ್ಗೋಪಾಯಗಳ ಬಗ್ಗೆ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸುರಕ್ಷಿತ ಶೆಟ್ಟಿ ಉಪನ್ಯಾಸ ನೀಡಿದರು.ಎಫ್‌ಕೆಟಿ ಕಿಟ್ ಮುಖಾಂತರ ನೀರಿನ ಗುಣಮಟ್ಟ ಪರೀಕ್ಷೆ ಕೈಗೊಳ್ಳುವ ಕಾರ್ಯವಿಧಾನದ ಬಗ್ಗೆ ಶಿರಸಿಯ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದ ಅಶ್ವಿನಿ ಅವರು ತರಬೇತಿ ನೀಡಿದರು.
ಗ್ರಾಮ ಪಂಚಾಯಿತಿಗಳ ಹಂತದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾಮಗಾರಿಗಳ ಅಂದಾಜು ಪತ್ರಿಕೆ ತಯಾರಿಸುವ ಬಗ್ಗೆ ತಾಂತ್ರಿಕ ತರಬೇತಿಯನ್ನು ಹೊನ್ನಾವರ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಉಪವಿಭಾಗದ ಅಭಿಯಂತರೆ ಮಾನಸ ಅವರು ತರಬೇತಿ ನೀಡಿದರು.ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಹಾಗೂ ಕ್ರಮಬದ್ದ ನಿರ್ವಹಣೆ ಮುಖಾಂತರ ವಿಶ್ವ ಬ್ಯಾಂಕ್ ನೆರವು ಯೋಜನೆಯಡಿ ಡಿಎಲ್ಐಗಳ ಅನುಷ್ಠಾನ ಬಗ್ಗೆ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಸಮಾಲೋಚಕ ಹರೀಶ್ ಕೆ. ತರಬೇತಿ ನೀಡಿದರು.
ಹರಿಯುವ ನೀರನ್ನು ತಡೆಹಿಡಿದು ಅಂತರ್ಜಲ ಮರುಪೂರ್ಣ ಮಾಡಲು ಇರುವ ವಿಧಾನಗಳು, ಮಳೆ ನೀರು ಕೊಯ್ಲು ಕುರಿತು ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಭೂ ವಿಜ್ಞಾನಿ ಅನಿರುದ್ಧ ಅವಧಾನಿ, ಜಲಜೀವನ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿ, ಹರ್ ಘರ್ ಜಲ್ ಘೋಷಣೆ ಕುರಿತು ಜಲಜೀವನ ಮಿಷನ್ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೆಂಕಟೇಶ ನಾಯ್ಕ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ, ದ್ರವ ತ್ಯಾಜ್ಯ ನಿರ್ವಹಣೆ, ಮಾದರಿ ಗ್ರಾಮಗಳ ಘೋಷಣೆ ಕುರಿತು ಜಿಲ್ಲಾ ಪಂಚಾಯಿತಿ ಸ್ವ.ಭಾ.ಮಿ ಸಮಾಲೋಚಕ ಸೂರ‍್ಯನಾರಾಯಣ ಭಟ್ ಹಾಗೂ ಅಶ್ವಿನ್ ತರಬೇತಿ ನೀಡಿದರು.ತರಬೇತಿಯಲ್ಲಿ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಪ್ಪ ಮಡಿವಾಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೊಗೇರ, ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಲತಾ ನಾಯ್ಕ ಹಾಗೂ ಅಭಿಯಂತರರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಲೆಕ್ಕ ಸಹಾಯಕ ರಾಘವೇಂದ್ರ ಎಸ್. ಪೂಜಾರಿ ಸ್ವಾಗತಿಸಿ, ನಿರ್ವಹಿಸಿದರು.