ರೈತರ ಪಂಪ್‌ಸೆಟ್‌ಗಳಿಗೆ ಹಗಲುವೇಳೇಯಲ್ಲೆ ಸಮರ್ಪಕ ವಿದ್ಯುತ್ ಒದಗಿಸುವಂತೆ ಆದೇಶಿಸಲಾಗುವುದು

ಹಗರಿಬೊಮ್ಮನಹಳ್ಳಿ: ಪಿಎಂ ಕುಸುಮ ಯೋಜನೆಯಡಿ ಸಮರ್ಪಕ ವಿದ್ಯುತ್ ಒದಗುತ್ತಿದೆ ಈ ಹಿನ್ನೆಲೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಹಗಲುವೇಳೇಯಲ್ಲೆ ಸಮರ್ಪಕ ವಿದ್ಯುತ್ ಒದಗಿಸುವಂತೆ ಆದೇಶಿಸಲಾಗುವುದು ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ತಾಲೂಕಿನ ಈರುಳ್ಳಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಸಲ್ಲಿಸಿದ ಮನವಿಗೆ ಹೊಸಪೇಟೆಯಲ್ಲಿ ಪ್ರತಿಕ್ರಿಯಿಸಿದರು. ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿನ ವಿದ್ಯುತ್ ಉಪಕೇಂದ್ರವನ್ನು ೨೦ಎಂವಿಎ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.

ಹಗಲು ವೇಳೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಇತ್ತೀಚೆಗೆ ರಾತ್ರಿ ನೀರು ಕಟ್ಟುವ ವೇಳೆ ಹಾವು ಕಡಿದು ರೈತರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೆ ಜೆಸ್ಕಾಂ ಅಧಿಕಾರಿಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಆದೇಶಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು. ತೆಲುಗೋಳಿ ಬಳಿ ಹೊಸದಾಗಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಪ್ರತಿಕ್ರಿಯಿಸಿದರು.ಈರುಳ್ಳಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಆರ್.ಮೋಹನರೆಡ್ಡಿ, ಮುಖಂಡರಾದ ಮೈನಳ್ಳಿ ಕೊಟ್ರೇಶ್, ನಾಣಿಕೆರೆ ದೊಡ್ಡಬಸಪ್ಪ, ಹೆಬ್ಬಾಳ ದೇವರೆಡ್ಡಿ, ಅಂಬಿಗರ ಹನುಮಂತಪ್ಪ, ಹಲಗೇರಿ ಕೊಟ್ರೇಶ, ಅಂಬಿಗರ ಮೌನೇಶ ಇದ್ದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ಈರುಳ್ಳಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಹಗಲುವೇಳೆ ರೈತರ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಇಂಧನ ಸಚಿವ ಕೆ.ಜೆ. ಜಾರ್ಜ್ ಇವರಿಗೆ ಮನವಿ ಸಲ್ಲಿಸಿದರು.