ಕನ್ನಡಪ್ರಭ ವಾರ್ತೆ ಬೇಲೂರುವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ದಾಸೋಹದಲ್ಲಿ ಉಂಟಾಗಿದ್ದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಹಾಗೂ ಎಚ್‌ಪಿಸಿಎಲ್ ಸಹಕಾರದಿಂದ 20 ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳನ್ನು ಪೂರೈಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ಸ್ಥಗಿತಗೊಂಡಿತ್ತು. ಗೃಹೋಪಯೋಗಿ ಸಿಲಿಂಡರ್‌ಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದ್ದರಿಂದ ದೇವಸ್ಥಾನದ ದಾಸೋಹ ಕಾರ್ಯಕ್ರಮಕ್ಕೆ ಗ್ಯಾಸಿನ ಕೊರತೆ ಎದುರಾಗಿ ಎರಡು ದಿನ ದಾಸೋಹಕ್ಕೆ ತೊಂದರೆ ಉಂಟಾಗಿತ್ತು. ಮುಂದಿನ ವಾರದಿಂದ ಆರಂಭವಾಗುವ ಜಾತ್ರಾ ಮಹೋತ್ಸವ ಹಾಗೂ ಭಕ್ತಾದಿಗಳಿಗೆ ನೀಡುವ ಅನ್ನದಾಸೋಹ ಕಾರ್ಯಕ್ಕೆ ತೊಂದರೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ಹಿನ್ನೆಲೆಯಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಶ್ ಅವರು ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಸಮಸ್ಯೆಯನ್ನು ಗಮನಕ್ಕೆ ತಂದಿದ್ದರು. ನಂತರ ದೇವಪ್ರಸಾದ್ ಅವರ ಸಹಕಾರದೊಂದಿಗೆ ಗ್ಯಾಸ್ ಏಜೆನ್ಸಿ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು 20 ವಾಣಿಜ್ಯ ಸಿಲಿಂಡರ್‌ಗಳನ್ನು ದೇವಸ್ಥಾನಕ್ಕೆ ಪೂರೈಸಿದರು.ಈ ಕುರಿತು ಮಾತನಾಡಿದ ಚನ್ನಕೇಶವ ಗ್ಯಾಸ್ ಏಜನ್ಸಿ ಮಾಲೀಕರಾದ ದೇವುಪ್ರಸಾದ್ ಲತಾಮಂಜೇಶ್ವರಿ ಮಾತನಾಡಿ, “ಜಿಲ್ಲಾ ಆಡಳಿತದ ಸಹಕಾರ ಮತ್ತು ಎಚ್‌ಪಿಸಿಎಲ್ ಅಧಿಕಾರಿಗಳ ನೆರವಿನಿಂದ ದಾಸೋಹ ಕಾರ್ಯಕ್ರಮ ಯಾವುದೇ ರೀತಿಯಲ್ಲಿ ನಿಲ್ಲದಂತೆ ಇಂದು 20 ವಾಣಿಜ್ಯ ಸಿಲಿಂಡರ್‌ಗಳನ್ನು ಪೂರೈಸಲಾಗಿದೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ವಿನಂತಿಸಲಾಗಿದೆ. ದಾಸೋಹ ಕಾರ್ಯಕ್ರಮಕ್ಕೆ ಅಗತ್ಯವಿರುವಷ್ಟು ಸಿಲಿಂಡರ್‌ಗಳನ್ನು ಮುಂದೆಯೂ ಪೂರೈಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಇದೇ ವೇಳೆ ರಥೋತ್ಸವದ ಅವಧಿಯಲ್ಲಿ ದೇಶ, ವಿದೇಶಗಳಿಂದ ಆಗಮಿಸುವ ಭಕ್ತಾದಿಗಳ ಸೇವೆಗೆ ವಿವಿಧ ಮಠಗಳು ಹಾಗೂ ಸಂಘ ಸಂಸ್ಥೆಗಳು ದಾಸೋಹ ವ್ಯವಸ್ಥೆ ನಡೆಸುವ ಹಿನ್ನೆಲೆಯಲ್ಲಿ ಅವರಿಗೆ ಅಗತ್ಯವಿರುವ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳೂ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಈ ಸಿಲಿಂಡರ್‌ಗಳ ಪೂರೈಕೆಯಿಂದ ರಥೋತ್ಸವದ ಅಂಗವಾಗಿ ನಡೆಯುತ್ತಿರುವ ಅನ್ನದಾಸೋಹ ಕಾರ್ಯಕ್ರಮ ಸುಗಮವಾಗಿ ಮುಂದುವರಿಯಲು ನೆರವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನೂ 10 ರಿಂದ 20 ವಾಣಿಜ್ಯ ಸಿಲಿಂಡರ್‌ಗಳನ್ನು ಹೆಚ್ಚುವರಿಯಾಗಿ ಪೂರೈಸುವ ಸಾಧ್ಯತೆ ಇರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ದೇಗುಲದ ಸುಧಾಕರ್, ಕಿಟ್ಟಿ ಲತಾ ಮಂಜೇಶ್ವರಿ ಸೇರಿದಂತೆ ಇತರರು ಇದ್ದರು.