ದೇಶದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ: ಉಮೇಶ ಕಾರಜೋಳ

| Published : Apr 18 2024, 02:20 AM IST

ಸಾರಾಂಶ

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಚಿತ್ರದುರ್ಗ ಎಸ್‌ಜೆಎಂ ಕ್ರೀಡಾಂಗಣದಲ್ಲಿ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ದೇಶದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದೆ. ಅಟಲ್ ಬಿಹಾರಿ ವಾಜಪೇಯಿ ನಂತರ ಅಭಿವೃದ್ಧಿ, ಹಗರಣ ರಹಿತ ಸರ್ಕಾರ ನಡೆಯುತ್ತಿದೆ. ಉತ್ತಮ ಆಡಳಿತ ವ್ಯವಸ್ಥೆ ಮುಂದುವರೆಯಲು ಮತ್ತೊಮ್ಮೆ ನರೇಂದ್ರ ಮೋದಿ ಕೈ ಬಲಪಡಿಸಬೇಕಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.

ಚಿತ್ರದುರ್ಗ ನಗರದ ಎಸ್‌ಜೆಎಮ್ ಕ್ರಿಡಾಂಗಣದಲ್ಲಿ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಈ ಹಿಂದಿನ ಯುಪಿಎ ಆಡಳಿತದಲ್ಲಿ ಅಭಿವೃದ್ಧಿ ದೂರದ ಮಾತಾಗಿತ್ತು. ಕೇವಲ 2ಜಿ ಹಗರಣ, ಕಾಮನವೆಲ್ತ್ ಸೇರಿ ಹಗರಣಗಳ ಸರಮಾಲೆಯೇ ಕೇಳಿ ಬರುತ್ತಿತ್ತು, ಲಕ್ಷಾಂತರ ಕೋಟಿ ರು. ಅವ್ಯವಹಾರಗಳು ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದ್ದವು. ಕೆಟ್ಟ ವ್ಯವಸ್ಥೆ ನಡುವೆ ಆಶಾಕಿರಣವಾಗಿ ನರೇಂದ್ರ ಮೋದಿಜಿ ದೇಶದ ಆಡಳಿತ ಚುಕ್ಕಾಣಿ ಹಿಡಿದು ದೇಶದ ಜನತೆಗೆ ಹೊಸ ಭರವಸೆ ತುಂಬಿ ನುಡಿದಂತೆ ನಡೆದರು. ಈಗ ಅಭಿವೃದ್ಧಿ ಪರಂಪರೆ ಮುಂದುವರೆಯಲು ಮತ್ತೊಮ್ಮೆ ಮೋದಿಜಿರನ್ನು ಪ್ರಧಾನಿಯಾಗಿಸಬೇಕಿದೆ. ಭಾರತ ವಿಶ್ವಗುರುವಾಗಿಸುವ ಸಂಕಲ್ಪ ಹೊತ್ತ ನಾಯಕನ ಕೈ ಬಲಪಡಿಸಬೇಕಿದೆ ಎಂದು ಹೇಳಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಗೋವಿಂದ ಕಾರಜೋಳ ಜನಸಾಮಾನ್ಯರ ನೋವು ಅರಿತ ನಾಯಕ. ಸಾಮಾನ್ಯ ಹಂತದಿಂದಲೇ ಜನಾಶೀರ್ವಾದದ ಮೇಲೆ ರೂಪುಗೊಂಡಿರುವ ಅವರು ಜನರ ಸಮಸ್ಯೆ ನಿವಾರಣೆ ಕಳಕಳಿ ಹೊತ್ತಿದ್ದಾರೆ. ಅಭಿವೃದ್ಧಿ ಪರ ದೃಷ್ಟಿಯಿಂದ ಚಿತ್ರದುರ್ಗ ಜನತೆ ಈ ಬಾರಿ ಗೋವಿಂದ ಕಾರಜೋಳರಿಗೆ ಒಂದು ಅವಕಾಶ ನೀಡಬೇಕು ಎಂದರು. ಪ್ರೊ.ವಿಶ್ವನಾಥ, ಪ್ರವೀಣರೆಡ್ಡಿ, ನಾಗರಾಜ, ಪ್ರಜ್ವಲ್, ಮನೋಜ, ಕಾರ್ತಿಕ, ಪರಶುರಾಮ, ಶರತ, ಆದರ್ಶ ಯಾದವ ಹಾಗೂ ಬಿಜೆಪಿಯ ಅನೇಕ ಕಾರ್ಯಕರ್ತರು ಹಾಜರಿದ್ದರು.