ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಸದ, ರೈತರ ಬವಣೆಗೆ ಸ್ಪಂದಿಸದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೇಸರಗೊಂಡಿರುವ ಮತದಾರರು ಲೋಕಸಭೆ ಚುನಾವಣೆಯಲ್ಲಿ ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮನವಿ ಮಾಡಿದರು.ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಶನಿವಾರ ಸಂಜೆ ದಲಿತ ಮುಖಂಡ ಸುರೇಶ ತಳವಾರ ನೇತೃತ್ವದಲ್ಲಿ ನಡೆದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅನೇಕ ಸುಳ್ಳುಗಳಿಂದ ಜನತೆಯನ್ನು ವಂಚಿಸುವ ಬಿಜೆಪಿಯನ್ನು ಧಿಕ್ಕರಿಸಬೇಕು ಎಂದು ಹೇಳಿದರು.
ಕೇವಲ ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಜಾತಿ-ಧರ್ಮದ ನಡುವೆ ವಿಷ ಬೀಜ ಬಿತ್ತುತ್ತಿದ್ದು, ಜನರು ಭ್ರಮನಿರಶನಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯಕೈಗೊಳ್ಳುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಹೃದಯ ಗೆದ್ದಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.ನೇತೃತ್ವ ವಹಿಸಿದ್ದ ದಲಿತ ಮುಖಂಡ ಸುರೇಶ ತಳವಾರ ಮಾತನಾಡಿ, ಸಚಿವ ಸತೀಶ ಜಾರಕಿಹೊಳಿ ಸದಾ ಎಸ್ಸಿ,ಎಸ್ಟಿ, ಹಿಂದುಳಿದ ವರ್ಗ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಮೇಲ್ವರ್ಗದ ಬಡವರ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಋಣ ತೀರಿಸಲು ಇದೀಗ ಸಮಯ ಕೂಡಿ ಬಂದಿದ್ದು, ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸುವ ಪಣ ತೊಡುವ ಮೂಲಕ ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಲೀಡ್ ಕೊಡಿಸಲು ಶ್ರಮಿಸೋಣ ಎಂದು ಹೇಳಿದರು.
ಮುಖಂಡರಾದ ರಾಹುಲ್ ಜಾರಕಿಹೊಳಿ, ಭೀಮಪ್ಪ ರಾಮಗೋನಟ್ಟಿ, ಗುರು ಪಾಟೀಲ, ರವಿ ಕರಾಳೆ, ಅಶೋಕ ಅಂಕಲಗಿ, ರಿಷಭ ಪಾಟೀಲ, ಇಲಿಯಾಸ್ ಇನಾಮದಾರ, ಮಲ್ಲೇಶ ಚೌಗಲೆ, ಮಯೂರ ತಳವಾರ, ಶೀತಲ್ ಮಠಪತಿ, ಬಿ.ಕೆ. ಸದಾಶಿವ, ರಾಜೇಂದ್ರ ಮೋಶಿ, ಶಿವಾನಂದ ಮರಿನಾಯಿಕ, ಅಪ್ಪಣ್ಣ ಖಾತೇದಾರ, ಕುಮಾರ ತಳವಾರ, ದೀಪಕ ವೀರಮುಖ, ರಮೇಶ ತಳವಾರ, ಲಗಮಣ್ಣ ಕಣಗಲಿ, ಮಾರುತಿ ತಳವಾರ, ಕುಮಾರ ಗಸ್ತಿ, ಶಂಕರ ತಿಪ್ಪನಾಯಿಕ ಮತ್ತಿತರರು ಉಪಸ್ಥಿತರಿದ್ದರು.ಶಿವು ಕಣಗಲಿ ನಿರೂಪಿಸಿದರು. ಬಸವರಾಜ ತಳವಾರ ವಂದಿಸಿದರು. ಗುಡಸ, ಕೊಟಬಾಗಿ, ಹುಲ್ಲೋಳಿ, ಯರನಾಳ, ಬಡಕುಂದ್ರಿ ಸೇರಿದಂತೆ ಮತ್ತಿತರರ ಗ್ರಾಮಗಳಲ್ಲಿ ಸಚಿವರು ಬಿರುಸಿನ ಪ್ರಚಾರ ನಡೆಸಿದರು.