ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿ

| Published : May 27 2024, 01:04 AM IST

ಸಾರಾಂಶ

ವಿಧಾನ ಪರಿಷತ್ತಿನ ಪದವೀಧರರ 3 ಕ್ಷೇತ್ರಗಳು ಹಾಗೂ ಶಿಕ್ಷಕರ 3 ಕ್ಷೇತ್ರಗಳು ಸೇರಿ ಒಟ್ಟು 6 ಸ್ಥಾನಗಳಿಗೆ ಜೂ.3ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಪ್ರಚಂಡ ಬಹುಮತದಿಂದ ಪರಿಷತ್ತಿಗೆ ಆಯ್ಕೆ ಮಾಡಲು ಮತದಾರರು ಸಹಕರಿಸಬೇಕು ಎಂದು ಕೆಪಿಸಿಸಿ ಶಿಕ್ಷಕರ ಘಟಕ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಪ್ರಥಮ ಪ್ರಾಶಸ್ತ್ಯದ ಮತ ನೀಡಿ, ಭಾರಿ ಅಂತರದಲ್ಲಿ ಗೆಲ್ಲಿಸಬೇಕು: ಬಸವರಾಜ ಗುರಿಕಾರ ಮನವಿ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ವಿಧಾನ ಪರಿಷತ್ತಿನ ಪದವೀಧರರ 3 ಕ್ಷೇತ್ರಗಳು ಹಾಗೂ ಶಿಕ್ಷಕರ 3 ಕ್ಷೇತ್ರಗಳು ಸೇರಿ ಒಟ್ಟು 6 ಸ್ಥಾನಗಳಿಗೆ ಜೂ.3ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಪ್ರಚಂಡ ಬಹುಮತದಿಂದ ಪರಿಷತ್ತಿಗೆ ಆಯ್ಕೆ ಮಾಡಲು ಮತದಾರರು ಸಹಕರಿಸಬೇಕು ಎಂದು ಕೆಪಿಸಿಸಿ ಶಿಕ್ಷಕರ ಘಟಕ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರು ರಾಜ್ಯ ಸರ್ಕಾರದ ಉತ್ತಮ ಸಾಧನೆ, ಒಳ್ಳೆಯ ಆಡಳಿತ ನೀಡಿದ್ದನ್ನು ಪರಿಗಣಿಸಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲಿಸುತ್ತಿದ್ದಾರೆ. ಉಭಯ ಕ್ಷೇತ್ರಗಳ ಮತದಾರರು ಪ್ರಥಮ ಪ್ರಾಶಸ್ತ್ಯದ ತಮ್ಮ ಮತ ನೀಡುವ ಮೂಲಕ ಭಾರೀ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

₹70 ಕೋಟಿ ಅನುದಾನ:

ಮೇಲ್ಮನೆಯ ಎಲ್ಲ ಆರೂ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ನಮ್ಮ ಐದೂ ಗ್ಯಾರಂಟಿ ಯೋಜನೆಗಳು, ಪದವೀಧರರ ಯೋಜನೆಯಾದ ಯುವನಿಧಿ ಸಹ ನಿರುದ್ಯೋಗಿ ಪದವೀಧರರಿಗೆ ಆಶಾಕಿರಣವಾಗಿದೆ. ಸರ್ಕಾರಿ ಶಾಲೆಗಳಿಗೆ 11,494 ಶಿಕ್ಷಕರ ನೇಮಕ ಮಾಡಿದ್ದರೆ, 35 ಸಾವಿರ ಅತಿಥಿ ಬೋಧಕರನ್ನು ನೇಮಿಸಲಾಗಿದೆ. 2162 ಸರ್ಕಾರಿ ಶಾಲೆಗಳ 7342 ಕೊಠಡಿಗಳ ದುರಸ್ತಿಗೆ ₹70 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ 58 ಲಕ್ಷ ವಿದ್ಯಾರ್ಥಿಗಳಿಗೆ ₹280 ಕೋಟಿ ವೆಚ್ಚದಲ್ಲಿ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯ 45 ಲಕ್ಷ ಮಕ್ಕಳಿಗೆ ₹142 ಕೋಟಿ ವೆಚ್ಚದಲ್ಲಿ ಎರಡು ಜೊತೆ ಸಮವಸ್ತ್ರ ನೀಡಲಾಗಿದೆ. ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿ.ವಿ.ಗಳಿಗೆ ತಲಾ ₹50 ಲಕ್ಷದಂತೆ ಒಟ್ಟು ₹350 ಕೋಟಿ ಅನುದಾನ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಕನಿಷ್ಠ 5ರಿಂದ ಗರಿಷ್ಠ ₹8 ಸಾವಿರವರೆಗೆ ವೇತನ ಹೆಚ್ಚಿಸಲಾಗಿದೆ. ಅತಿಥಿ ಉಪನ್ಯಾಸಕರಿಗೆ ರಜಾ ಸೌಲಭ್ಯ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಿಮ್ಮಯ್ಯ ಪುರ್ಲೆ, ಎಂ.ಆರ್.ಮಾರ್ತಾಂಡಪ್ಪ, ಲಕ್ಷ್ಮಣ, ಅನುಪಮ, ವೀರೇಶ, ಆರ್.ಎಸ್.ಪಾಟೀಲ್, ಜಿ.ಬಿ.ಹಾವೇರಿ ಇತರರು ಇದ್ದರು.

- - -

ಬಾಕ್ಸ್‌ ಎನ್‌ಪಿಎಸ್ ಬದಲು ಎಸ್‌ಇಪಿ ಜಾರಿಗೆ ಸಮಿತಿರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ. ₹5 ಲಕ್ಷ ವೈದ್ಯಕೀಯ ಸೌಲಭ್ಯ, 60 ವರ್ಷದ ನಂತರ ನಿವೃತ್ತಿಯಾಗುವ ಹೊತ್ತಿಗೆ ಬರಿಗೈನಿಂದ ಕಳಿಸದೇ, ₹5 ಲಕ್ಷ ಇಡುಗಂಟು ನೀಡಲಾಗುವುದು. 19 ಸಾವಿರ ಎನ್‌ಪಿಎಸ್‌ ಯೋಜನೆಯಲ್ಲಿದ್ದ ನೌಕರರನ್ನು ಒಪಿಎಸ್‌ ವ್ಯಾಪ್ತಿಗೊಳಪಡಿಸಲಾಗಿದೆ. ಶಿಕ್ಷಕರ ಕೋರಿಕೆಯ ಮೇರೆಗೆ 20 ಸಾವಿರ ಶಿಕ್ಷಕರಿಗೆ ಆಯಾ ಶಿಕ್ಷಕ-ಶಿಕ್ಷಕಿಯರು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡುವ ಮೂಲಕ ಶಿಕ್ಷಕರ ಹಿತಕಾಯುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆ ನೀಡಿದ ಕ್ಷಣಾರ್ಧದಲ್ಲೇ ರಾಜ್ಯದ ಸರ್ಕಾರಿ ನೌಕರರಿಗೆ ಕಾಂಗ್ರೆಸ್ ಸರ್ಕಾರ ತುಟ್ಟಿಭತ್ಯೆ ಹೆಚ್ಚಿಸಿದೆ. ಎನ್‌ಪಿಎಸ್ ಬದಲು ಎಸ್‌ಇಪಿ ಜಾರಿಗೊಳಿಸಲು ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

- - - -26ಕೆಡಿವಿಜಿ1:

ದಾವಣಗೆರೆಯಲ್ಲಿ ಭಾನುವಾರ ಕೆಪಿಸಿಸಿ ಶಿಕ್ಷಕರ ಘಟಕ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.