ಕೇಂದ್ರದಲ್ಲಿ 25 ಗ್ಯಾರಂಟಿ ಜಾರಿಗೆ ಕಾಂಗ್ರೆಸ್ ಬೆಂಬಲಿಸಿ

| Published : Apr 21 2024, 02:26 AM IST

ಸಾರಾಂಶ

ರಾಜ್ಯ ಸರ್ಕಾರದ ಮಾದರಿಯಲ್ಲಿ ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿಗಳನ್ನು ಜಾರಿ ಗೊಳಿಸುವ ಮೂಲಕ ಎಲ್ಲಾ ವರ್ಗದವರಿಗೂ ನ್ಯಾಯವನ್ನು ಕಲ್ಪಿಸಲಾಗುತ್ತದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಕೆರೆಹಳ್ಳಿ ನವೀನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರದ ಮಾದರಿಯಲ್ಲಿ ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿಗಳನ್ನು ಜಾರಿ ಗೊಳಿಸುವ ಮೂಲಕ ಎಲ್ಲಾ ವರ್ಗದವರಿಗೂ ನ್ಯಾಯವನ್ನು ಕಲ್ಪಿಸಲಾಗುತ್ತದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಕೆರೆಹಳ್ಳಿ ನವೀನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ನೀಡಿದೆ. ದೇಶದಲ್ಲಿ ಕಳೆದ ಹತ್ತು ತಿಂಗಳಿಂದ ಪ್ರಧಾನಿ ನರೇಂದ್ರ ಮೋದಿ ದುರಾಡಳಿತವನ್ನು ನೋಡಿ ಜನರು ಬೇಸತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಪರ ಆಲೆ ಎದ್ದಿದ್ದು, 25 ಗ್ಯಾರಂಟಿಗಳನ್ನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಪ್ರತಿ ಮನೆಗೆ ಇದನ್ನು ತಲುಪಿಸುವ ಕಾರ್ಯವನ್ನು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮಾಡಿದ್ದಾರೆ ಎಂದರು.ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಪ್ರಮುಖ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಪ್ರತಿ ವರ್ಷ ಬಡ ಕುಟುಂಬದ ಒಬ್ಬ ಮಹಿಳೆಗೆ 1 ಲಕ್ಷ ರು. ಪ್ರತಿಯೊಬ್ಬ ವಿದ್ಯಾವಂತ ಯುವಕರಿಗೆ ಮೊದಲ ಉದ್ಯೋಗದ ಗ್ಯಾರಂಟಿಯಾಗಿ 1 ಲಕ್ಷ ರು.ವೇತನ, ರೈತರ ಸಾಲ ಮನ್ನಾ, ಸ್ವಾಮಿನಾಥನ್ ಆಯೋಗದ ಪ್ರಕಾರ ಎಂಎಸ್‌ಪಿಗೆ ಕಾನೂನು ಸ್ಥಾನಮಾನ ನೀಡಿಕೆ. ಉದ್ಯೋಗ ಖಾತರಿ ಯೋಜನೆಯ ಕೂಲಿಯನ್ನು ದಿನಕ್ಕೆ ೪೦೦ ರು.ಗಳಷ್ಟು ಏರಿಕೆ, ಪಾಲುದಾರಿಕೆ ನ್ಯಾಯವಾಗಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಜನಗಣತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿ ಸಮುದಾಯವನ್ನು ಪರಿಗಣಿಸುವ ಘೋಷಣೆಯನ್ನು ಕಾಂಗ್ರೆಸ್ ಮಾಡಿದೆ. ಇದರೊಟ್ಟಿಗೆ 25 ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಪ್ರಮುಖವಾಗಿ ಎಲ್ಲಾ ಯೋಜನೆಗಳು ಅನುಷ್ಠಾನವಾಗಲು ರಾಜ್ಯದ ಮತದಾರರು ಹಾಗೂ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕೆರಹಳ್ಳಿ ನವೀನ್ ಮನವಿ ಮಾಡಿದರು. ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ನಲ್ಲೂರು ಸೋಮೇಶ್ವರ, ಮುಖಂಡರಾದ ಅರಕಲವಾಡಿ ಸೋಮನಾಯಕ, ವಕೀಲ ಚಿನ್ನಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಸಿ.ಎ ಮಹದೇವಶೆಟ್ಟಿ, ರಾಜೇಶ್ ಗೌಡಹಳ್ಳಿ ಇದ್ದರು. 20ಸಿಎಚ್‌ಎನ್‌53