ರೈತರ ಹಿತ ಕಾಯುವ ಅಭ್ಯರ್ಥಿಗಳಿಗೆ ಬೆಂಬಲ: ರೈತ ಸಂಘ ಘೋಷಣೆ

| Published : Apr 24 2024, 02:27 AM IST

ರೈತರ ಹಿತ ಕಾಯುವ ಅಭ್ಯರ್ಥಿಗಳಿಗೆ ಬೆಂಬಲ: ರೈತ ಸಂಘ ಘೋಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿ ರೈತ ಹೋರಾಟದ ಒತ್ತಾಯಗಳ ಜಾರಿ, ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡಬೇಕು. ದೇಶದ ರೈತರ ಸಂಪೂರ್ಣ ಸಾಲಮನ್ನಾ, 60 ವರ್ಷ ಕೃಷಿ ಸೇವೆ ಸಲ್ಲಿಸಿದ ರೈತರಿಗೆ ಪಿಂಚಣಿ ನೀಡಬೇಕು. ಸಂಸದರ ನಿಧಿಯನ್ನು ಕೆರೆಕಟ್ಟೆ, ಕಾಲುವೆಗಳ ಹುಳೆತ್ತಿಸಲು, ಪುನಶ್ಚೇತನಗೊಳಿಸಲು ಹಾಗೂ ಶಾಲೆ, ಆಸ್ಪತ್ರೆಗಳ, ನಿರ್ಮಾಣಕ್ಕೆ, ಕುಡಿಯುವ ನೀರು ಸೌಲಭ್ಯಕ್ಕೆ ಬಳಸುವುದಾಗಿ ಭರವಸೆ ನೀಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೈತರ ಹಿತ ಕಾಯುವ ಅಭ್ಯರ್ಥಿಗಳಿಗೆ ಬೆಂಬಲ ನೀಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳು ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ಗನ್‌ ಹೌಸ್‌‍ವೃತ್ತದಲ್ಲಿರುವ ಕುವೆಂಪು ಉದ್ಯಾನವನದಲ್ಲಿ ಮಂಗಳವಾರ ನಡೆದ ರೈತರ ಚಿಂತನ ಮಂಥನ ಸಭೆಯಲ್ಲಿ ರೈತ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರೈತರು ಯಾವುದೇ ಪಕ್ಷದ ಪರವಲ್ಲ. ರೈತರ ಅಭ್ಯುದಯಕ್ಕಾಗಿ ಶ್ರಮಿಸುವ ಅಭ್ಯರ್ಥಿಗಳನ್ನು ಬೆಂಬಲಿಸಲು ಸ್ಥಳೀಯವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ದೆಹಲಿ ರೈತ ಹೋರಾಟದ ಒತ್ತಾಯಗಳ ಜಾರಿ, ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡಬೇಕು. ದೇಶದ ರೈತರ ಸಂಪೂರ್ಣ ಸಾಲಮನ್ನಾ, 60 ವರ್ಷ ಕೃಷಿ ಸೇವೆ ಸಲ್ಲಿಸಿದ ರೈತರಿಗೆ ಪಿಂಚಣಿ ನೀಡಬೇಕು. ಸಂಸದರ ನಿಧಿಯನ್ನು ಕೆರೆಕಟ್ಟೆ, ಕಾಲುವೆಗಳ ಹುಳೆತ್ತಿಸಲು, ಪುನಶ್ಚೇತನಗೊಳಿಸಲು ಹಾಗೂ ಶಾಲೆ, ಆಸ್ಪತ್ರೆಗಳ, ನಿರ್ಮಾಣಕ್ಕೆ, ಕುಡಿಯುವ ನೀರು ಸೌಲಭ್ಯಕ್ಕೆ ಬಳಸುವುದಾಗಿ ಭರವಸೆ ನೀಡಬೇಕು ಎಂದರು.

ದೇಶದ ರೈತರನ್ನು ಸಂರಕ್ಷಿಸಲು ಭಾರತ ಸರ್ಕಾರ ವಿಶ್ವ ವ್ಯಾಪಾರ ಒಪ್ಪಂದದಿಂದ ಹೊರಗೆ ಬರಬೇಕೆಂದು ಒತ್ತಾಯಿಸಬೇಕು. ಫಸಲ್‌ಬೀಮಾ ಬೆಳೆ ವಿಮೆ ಯೋಜನೆ ಬದಲಾಯಿಸಿ ಪ್ರತಿ ರೈತರ ಹೊಲದ ಬೆಳೆ ವಿಮೆ ಜಾರಿಗೆ ತರಬೇಕು. ಬೆಳೆ ವಿಮೆ ಪರಿಹಾರ 30 ದಿನದ ಒಳಗೆ ಸಿಗುವಂತಾಗಬೇಕು. ನಕಲಿ ಬಿತ್ತನೆ ಬೀಜ, ನಕಲಿ ಗೊಬ್ಬರ, ನಕಲಿ ಕೀಟ ಕೀಟನಾಶಕ ಮಾರಾಟಕ್ಕೆ ತಡೆ, ಕೃಷಿ ಉಪಕರಣಗಳ ಮೇಲಿನ ಜಿ.ಎಸ್‌.‍ಟಿ ತೆರಿಗೆಯನ್ನು ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದರು.

ರೈತರ ಕೃಷಿ ಭೂಮಿ ಬಂಡವಾಳಶಾಹಿಗಳ ಪಾಲಾಗುವುದನ್ನು ತಪ್ಪಿಸಲು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದು ಮಾಡಲು ಒತ್ತಾಯಿಸಬೇಕು. ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ಕೃಷಿ ಸಮಾನ್‌ಯೋಜನೆ ಹಣ ಮರು ಜಾರಿಗೆ ತರಲು ಒತ್ತಾಯಿಸಬೇಕು. ಬಗರು ಹುಕುಂ ಸಾಗುವಳಿ ಮಾಡಿದ ಫಲಾನುಭವಿ ರೈತರಿಗೆ ಭೂಸ್ವಾಧೀನ ಪತ್ರ ಮಂಜೂರು ಪತ್ರ ಯಾವುದೇ ಷರತ್ತು ಇಲ್ಲದೆ ಕೊಡಿಸಬೇಕು ಎಂದರು.

ಎಲ್ಲಾ ಕೃಷಿ ಕಾರ್ಮಿಕರಿಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ನೀಡಬೇಕು. ಕಬ್ಬಿನ ಎಫ್‌.ಆರ್‌.ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಬ್ಬನ್ನು ಬೆಳೆ ವಿಮೆ ವ್ಯಾಪ್ತಿಗೆ ತರಬೇಕು. ಕೃಷಿ ಸಾಲ ನೀತಿ ಬದಲಾಗಬೇಕು. ರೈತನ ಭೂಮಿ ಮೌಲ್ಯಕ್ಕೆ ಶೇ.75 ಸಾಲ ನೀಡುವ ಯೋಜನೆ ಜಾರಿಗೆ ಬರಬೇಕು. ಎನ್‌.ಡಿ.ಆರ್‌.ಎಫ್‌‍ ಮಾನದಂಡ ಬದಲಾಗಬೇಕು. ವೈಜ್ಞಾನಿಕ ಪರಿಹಾರ ಕೂಡಲೇ ಸಿಗುವಂತಾಗಬೇಕು. ಕಾಡಂಚಿನ ಭಾಗದಲ್ಲಿ ವನ್ಯಜೀವಿಗಳಿದ್ದ ಆಗುವ ಬೆಳೆ ಹಾನಿ, ಮಾನವ ಹಾನಿ, ಸಂಘರ್ಷ ತಪ್ಪಿಸಲು ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಅವರು ತಿಳಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌‍, ಮುಖಂಡರಾದ ಬರಡನಪುರ ನಾಗರಾಜ್‌‍, ಕಿರಗಸೂರು ಶಂಕರ್‌, ಉಡಿಗಾಲ ರೇವಣ್ಣ. ಸಿದ್ದೇಶ್‌, ವೆಂಕಟೇಶ್‌, ವಿಜಯೇಂದ್ರ, ಸತೀಶ್‌, ನೀಲಕಂಠಪ್ಪ, ಕೆಂಡಗಣ್ಣಸ್ವಾಮಿ, ಮೂಕಹಳ್ಳಿ ಮಹದೇವಸ್ವಾಮಿ, ಷಡಕ್ಷರಿ, ಅಂಬಳೆ ಮಂಜುನಾಥ್‌ ಮೊದಲಾದವರು ಇದ್ದರು.ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಅಂಗೈಯಲ್ಲಿ ಆಕಾಶ ತೊರುವ, ಮತದಾರರನ್ನು ಮರಳು ಮಾಡುವ ಆಷಾಢಬೂತಿಗಳು. ರೈತರ ಹೆಸರಿನಲ್ಲಿ ಕಾರ್ಯನಿರ್ವಹಿಸುವ ರೈತ ಸಂಘಗಳು ರಾಜಕೀಯ ಪಕ್ಷಗಳ ಹಂಗಿನಲ್ಲಿ ಸಾಗಿ ಪಕ್ಷಗಳ ಪರ ಪ್ರಚಾರ ಮಾಡುವ ಗುಲಾಮಗಿರಿ ಮಾಡಬಾರದು. ದೆಹಲಿ ರೈತ ಹೋರಾಟದ ಒತ್ತಾಯಗಳ ಬಗೆ ಬದ್ಧತೆ ತೋರುವ ಅಭ್ಯರ್ಥಿಗೆ ನಮ್ಮ ಬೆಂಬಲ.

- ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ, ಕಬ್ಬು ಬೆಳೆಗಾರರ ಸಂಘ