ಹಳೆ ಕುಂದುವಾಡ ಕೆಳಸೇತುವೆ ಹೋರಾಟಕ್ಕೆ ಬೆಂಬಲ: ಸಚಿವ

| Published : Feb 18 2025, 12:30 AM IST

ಸಾರಾಂಶ

ಕುಡಿಯುವ ನೀರಿನ ಕೆರೆ ನಿರ್ಮಿಸಲು ಈ ಹಿಂದೆ ಸಾಕಷ್ಟು ಅಡೆತಡೆ, ತೊಡಕುಗಳಿದ್ದಾಗ ಹಳೆ ಕುಂದುವಾಡ ಗ್ರಾಮದ ಹಿರಿಯರು ನನ್ನ ಬೆನ್ನುತಟ್ಟಿ, ಬೆಂಬಲಿಸಿದ್ದರು. ಇದರಿಂದಾಗಿ ಇಂದು ಜಿಲ್ಲಾ ಕೇಂದ್ರಕ್ಕೆ ನೀರಿನ ಸಮಸ್ಯೆಯೇ ಇಲ್ಲವಾಗಿದೆ. ಒಗ್ಗಟ್ಟಿನಿಂದಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇದು ನಿದರ್ಶನ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

- ರಾಷ್ಟ್ರೀಯ ಹೆದ್ದಾರಿಗೆ ವಿಶಾಲ ಅಂಡರ್ ಪಾಸ್‌ಗೆ ಬೇಡಿಕೆ ನ್ಯಾಯೋಚಿತವಿದೆ: ಎಸ್‌.ಎಸ್‌.ಮಲ್ಲಿಕಾರ್ಜುನ

- ಶ್ರೀ ಆಂಜನೇಯ, ಶ್ರೀ ಬಸವೇಶ್ವರ ದೇವಸ್ಥಾನ ಉದ್ಘಾಟನೆ, ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ- ಕಳಸಾರೋಹಣ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕುಡಿಯುವ ನೀರಿನ ಕೆರೆ ನಿರ್ಮಿಸಲು ಈ ಹಿಂದೆ ಸಾಕಷ್ಟು ಅಡೆತಡೆ, ತೊಡಕುಗಳಿದ್ದಾಗ ಹಳೆ ಕುಂದುವಾಡ ಗ್ರಾಮದ ಹಿರಿಯರು ನನ್ನ ಬೆನ್ನುತಟ್ಟಿ, ಬೆಂಬಲಿಸಿದ್ದರು. ಇದರಿಂದಾಗಿ ಇಂದು ಜಿಲ್ಲಾ ಕೇಂದ್ರಕ್ಕೆ ನೀರಿನ ಸಮಸ್ಯೆಯೇ ಇಲ್ಲವಾಗಿದೆ. ಒಗ್ಗಟ್ಟಿನಿಂದಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇದು ನಿದರ್ಶನ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಹೊರವಲಯದ ಹಳೆ ಕುಂದುವಾಡ ಗ್ರಾಮದ ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನ ಉದ್ಘಾಟನೆ, ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಈಗ ಕುಂದುವಾಡ ಕೆರೆ ಬಳಿ ಬೃಹತ್ ಘಟಕ ನಿರ್ಮಾಣವಾಗಿದೆ. ನೀರಿನ ಸಮಸ್ಯೆ ಇಂದು ಕಾಣುತ್ತಿಲ್ಲವೆಂದರೆ ಅದಕ್ಕೆ ಕುಂದುವಾಡ ಗ್ರಾಮದ ಆಗಿನ ಹಿರಿಯರ ಪ್ರೋತ್ಸಾಹ, ಗ್ರಾಮಸ್ಥರ ಸ್ಪಂದನೆ ಕಾರಣ ಎಂದರು.

ನನೆಗುದಿಗೆ ಬಿದ್ದಿದ್ದ ಹಳೆ ಕುಂದುವಾಡ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ಈಗ ಕಾಲಕೂಡಿ ಬಂದಿದೆ. ಶಿಲಾ ದೇಗುಲಗಳ ಅತ್ಯುತ್ತಮ, ಆಕರ್ಷಕವಾಗಿ ಮೂಡಿಬಂದಿವೆ. ಕಾಂಗ್ರೆಸ್ ಬಡವರ ಪಕ್ಷ‍ವಾಗಿದ್ದು, ದೀನ ದಲಿತರು, ದಮನಿತರ ಅಭಿವೃದ್ಧಿಗೆ ಉತ್ತಮ ಕಾರ್ಯಗಳನ್ನು ನಮ್ಮ ಸರ್ಕಾರ ಕೈಗೊಳ್ಳುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಬ್ಬರ ಸಹಕಾರ ಇರಲಿ ಎಂದು ಮನವಿ ಮಾಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಕಾಮಗಾರಿ ವೇಳೆ ಅಂಡರ್ ಪಾಸ್ ಚಿಕ್ಕದಾಗಿ ಕಟ್ಟಲು ಮುಂದಾಗಿದ್ದನ್ನು ವಿರೋಧಿಸಿ, ಹೋರಾಟ ಮಾಡುತ್ತಿದ್ದೀರಿ. ಶಾಮನೂರು ಗ್ರಾಮಸ್ಥರು ನಿರಂತರ ಹೋರಾಟ ನಡೆಸಿದ್ದರಿಂದ ಉತ್ತಮ ಅಂಡರ್ ಪಾಸ್ ಅಲ್ಲಿ ನಿರ್ಮಾಣವಾಗಿದೆ. ಅಧಿಕಾರಿಗಳು ಮಾತು ಕೇಳಬೇಕೆಂದರೆ ಹೋರಾಟ ಅಗತ್ಯವಾಗಿದೆ. ಇಲ್ಲವಾದರೆ ಅಧಿಕಾರಿಗಳು ಯಾರ ಮಾತನ್ನೂ ಕೇಳುವುದಿಲ್ಲ. ಹಳೆ ಕುಂದುವಾಡ ಗ್ರಾಮಸ್ಥರ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ ಎಂದು ಭರವಸೆ ನೀಡಿದರು.

ವಿಶಾಲವಾದ ಕೆಳಸೇತುವೆ ನಿರ್ಮಾಣ ಮಾಡಬೇಕೆಂಬ ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. ಶಾಮನೂರು ಗ್ರಾಮಸ್ಥರು 2 ವರ್ಷ ಕಾಲ ಕಾಮಗಾರಿ ತಡೆ ಹಿಡಿದಿದ್ದರು. ನಾವೂ ಹಳೆ ಕುಂದುವಾಡ ಬಳಿ ಕೆಳ ಸೇತುವೆ ಗ್ರಾಮಸ್ಥರ ಬೇಡಿಕೆಯಂತೆ ಕಟ್ಟಲು ಸೂಚಿಸಿದ್ದೇವೆ. ನೀವು ನಿಮ್ಮ ಹೋರಾಟ ಮುಂದುವರಿಸಿ. ಅಧಿಕಾರಿಗಳೇ ನಿಮ್ಮ ಬಳಿ ಬರುತ್ತಾರೆ. ಒಗ್ಗಟ್ಟಿನಿಂದ ಬೇಡಿಕೆಗಾಗಿ ಹೋರಾಟ ಮಾಡಿ. ನಾವೂ ನಿಮ್ಮೊಂದಿಗೆ ಇದ್ದೇವೆ ಎಂದು ಸಚಿವ ಮಲ್ಲಿಕಾರ್ಜುನ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಹೊಸದುರ್ಗ ಕನಕ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ನಮಗೆ ಇಂದು ಭಕ್ತಿ, ಜ್ಞಾನ ಎರಡೂ ಮುಖ್ಯ. ಭಕ್ತಿ ಹೆಚ್ಚಿಸುವ ದೇವಾಲಯಗಳ ಜೊತೆಯಲ್ಲೇ ಜ್ಞಾನ ವಿಸ್ತರಿಸುವ ವಿದ್ಯಾಲಯಗಳೂ ಹೆಚ್ಚಾಗಬೇಕು. ಇಂದಿನ ಮಕ್ಕಳನ್ನು ಐಎಎಸ್, ಐಪಿಎಸ್‌, ಕೆಎಎಸ್‌ನಂತಹ ಉನ್ನತ ಶಿಕ್ಷಣ ಹಾಗೂ ಸಂಸ್ಕಾರ ನೀಡಲು ಪಾಲಕರು ಮುಂದಾಗಲಿ. ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು. ದುಂದುವೆಚ್ಚ ಕಡಿಮೆ ಮಾಡಬೇಕು ಎಂದರು.

ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಆಂಜನೇಯನಿಗೆ ಸೀಮಿತ ಜಾತಿಯ ಭಕ್ತರಿಲ್ಲ. ಆತ ಜಾತ್ಯತೀತ ವ್ಯಕ್ತಿ. ಭಕ್ತಿಗೆ ಹೆಸರಾದ ಆಂಜನೇಯ, ಸಮಾನತೆಗೆ ಹೆಸರಾದ ಬಸವೇಶ್ವರರ ದೇಗುಲ ಪ್ರತಿಷ್ಠಾಪನೆಯಿಂದ ಗ್ರಾಮಸ್ಥರು ಭಾವೈಕ್ಯ, ಸೌಹಾರ್ದ ಹಾಗೂ ಸಹಬಾಳ್ವೆಯಿಂದ ಮಾಡುತ್ತಿದ್ದಾರೆ. ಈ ಕುಂದುವಾಡ ಗ್ರಾಮ ಸೌಹಾರ್ದ ಗ್ರಾಮವಾಗಿ ಬದಲಾಗಲಿ ಎಂದು ತಿಳಿಸಿದರು.

ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವತತ್ವ ಎಲ್ಲರೂ ಕೂಡಿ ಬಾಳುವುದನ್ನು ಹೇಳಿದೆ. ಎಲ್ಲ ವರ್ಗಗಳಿಗೂ ಬಸವಣ್ಣನವರು ಸಾಮಾಜಿಕ ನ್ಯಾಯ ನೀಡಿದರು. ನಾವಿಂದು ಅದೇ ದಾರಿಯಲ್ಲಿ ಸಾಗಬೇಕಿದೆ. ಬಸವಣ್ಣ ಕಂಡು ಕನಸು ಕುಂದುವಾಡ ಗ್ರಾಮದಲ್ಲಿ ಅನಾವರಣವಾಗಿದ್ದು, ಇಲ್ಲಿ ಸದಾ ಶಾಂತಿ ನೆಲೆಸಲಿ ಎಂದು ಆಶಿಸಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮೈಲಾರ ಕ್ಷೇತ್ರದ ಕಾರ್ಣಿಕ ನುಡಿಯುವ ರಾಮಪ್ಪಜ್ಜ, ಹದಡಿ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ, ಶಾಸಕ ಕೆ.ಎಸ್. ಬಸವಂತಪ್ಪ, ಹಳೆ ಕುಂದುವಾಡದ ಸ್ವಾಮೀಜಿ ರಾಜಣ್ಣ, ಮುಖಂಡರಾದ ಬಿ.ಜಿ.ಅಜಯಕುಮಾರ, ಲೋಕಿಕೆರೆ ನಾಗರಾಜ್, ಶ್ರೀನಿವಾಸ ಟಿ.ದಾಸಕರಿಯಪ್ಪ, ಎಚ್.ವೆಂಕಟೇಶ್, ಜೆ.ಎನ್.ಶ್ರೀನಿವಾಸ. ಶ್ವೇತಾ ಶ್ರೀನಿವಾಸ, ಮುದೇಗೌಡ್ರ ಗಿರೀಶ್, ತಹಸೀಲ್ದಾರ್ ಬಿ.ಎನ್.ಅಶ್ವಥ್, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಜಿ.ಗಣೇಶಪ್ಪ, ಮಾಜಿ ಮೇಯರ್ ಎಚ್.ಎನ್. ಗುರುನಾಥ, ಎಚ್.ಜಿ.ಮಂಜಪ್ಪ, ಎಚ್.ಜಿ.ದೊಡ್ಡಪ್ಪ, ಗೌಡರ ಬಸವರಾಜಪ್ಪ, ಸಿದ್ದನಗೌಡ, ಚನ್ನಬಸಪ್ಪ ಗೌಡ, ಎಚ್.ಬಿ.ಅಣ್ಣಪ್ಪ, ಜೆ.ಮಾರುತಿ, ಬಾರಿಕರ ಚಂದ್ರಪ್ಪ, ನರಸಪ್ಪರ ಶಿವಪ್ಪ, ಮಿಟ್ಲಕ್ಟೆ ಚಂದ್ರಪ್ಪ, ಬೆಳ್ಳೂಡಿ ಬಸಣ್ಣ, ಯು.ವಿ.ಶ್ರೀನಿವಾಸ, ಡಿಎಸ್‌ಎಸ್‌ನ ಮಂಜುನಾಥ, ಎಚ್‌.ಎಸ್‌. ಶ್ರೀನಿವಾಸ, ತಡಿಕೆಪ್ಪರ ನಿಂಗಪ್ಪ, ಎಚ್.ಎಸ್.ಉಮಾಪತಿ, ಜಿ.ಎಚ್.ಗಣೇಶ, ಎಸ್.ಬಿ.ವಿಜಯ್‌, ಸದಸ್ಯರು, ಗ್ರಾಮ ಮುಖಂಡರು, ಯುವಕರು, ಗ್ರಾಮಸ್ಥರು, ಮಕ್ಕಳು, ಮಹಿಳೆಯರು ಇದ್ದರು.

- - - ಕೋಟ್ಸ್‌ ದಾವಣಗೆರೆ-ಹಳೆ ಕುಂದುವಾಡ ಮುಖ್ಯ ರಸ್ತೆಗೆ ಹೊಂದಿಕೊಂಡ ರಸ್ತೆ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಇದನ್ನು ತೆರವುಗೊಳಿಸಿದರೆ ಗ್ರಾಮಸ್ಥರು ಬಯಸಿದಂತೆ 80 ಅಡಿ ರಸ್ತೆ ನಿರ್ಮಿಸಲು ಬದ್ಧರಿದ್ದೇವೆ. ದೂಡಾ ಅಧಿಕಾರಿಗಳು, ಜಮೀನಿನ ಮಾಲೀಕರು, ಗುತ್ತಿಗೆದಾರರನ್ನು ಸೇರಿಸಿ ಸಭೆ ನಡೆಸೋಣ

- ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ

ಹಳೆ ಕುಂದುವಾಡ ಭಾಗದಲ್ಲಿ ದೇಗುಲಗಳ ಸಂಖ್ಯೆ ಹೆಚ್ಚಿದೆ. ಹಿಂದುಳಿದ ವರ್ಗದ ಮಕ್ಕಳು ವಿದ್ಯಾವಂತರಾದರೆ ಇಂತಹ ಹತ್ತು ದೇವಸ್ಥಾನ ಕಟ್ಟುತ್ತಾರೆ. ಹಾಗಾಗಿ, ದೇವಸ್ಥಾನಗಳನ್ನು ಕಟ್ಟುವಂತೆಯೇ ಶಾಲೆಗಳ ನಿರ್ಮಾಣಕ್ಕೂ ಮಹತ್ವ ನೀಡಬೇಕು

- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ

- - - -17ಕೆಡಿವಿಜಿ13:

ದಾವಣಗೆರೆಯ ಹಳೆ ಕುಂದುವಾಡದಲ್ಲಿ ದೇವಸ್ಥಾನ ಉದ್ಘಾಟನೆ, ಶ್ರೀ ಆಂಜನೇಯ, ಶ್ರೀ ಬಸವೇಶ್ವರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.