ಸಾರಾಂಶ
ಹಿರೇಕೆರೂರು: ಭಾರತವನ್ನು ಅಭಿವೃದ್ಧಿ ಪಥದತ್ತ ಸಾಗಿಸುವ ಜತೆಗೆ, ಭದ್ರತೆಗೆ ಆದ್ಯತೆ ನೀಡಿ ಉಗ್ರರನ್ನು ಮಟ್ಟ ಹಾಕುವ ಕಾರ್ಯ ಮಾಡಿ ದೇಶದ ಜನತೆ ನೆಮ್ಮದಿಯಿಂದ ಇರುವಂತೆ ಮಾಡಿದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ಬೆಂಬಲಿಸಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಮನವಿ ಮಾಡಿದರು.ಬಸರೀಹಳ್ಳಿ ಗ್ರಾಮದಲ್ಲಿ ಹಾವೇರಿ, ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು. ಬಿಜೆಪಿಯಿಂದ ಮಾತ್ರ ಈ ದೇಶದ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯ. ಎಲ್ಲೆಡೆ ಮೋದಿ ಆಡಳಿತದ ಕಾರ್ಯವೈಖರಿಯನ್ನು ಎಲ್ಲ ಧರ್ಮದ ಮತದಾರರು ಮೆಚ್ಚಿಕೊಂಡಿದ್ದು, ಆರ್ಥಿಕ ಸ್ಥಿತಿಯಲ್ಲಿ ೧೦ ಸ್ಥಾನದಲ್ಲಿದ್ದ ಭಾರತ ದೇಶವನ್ನು ೫ನೇ ಸ್ಥಾನಕ್ಕೆ ತಂದಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾಗುವಂತಹ ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೆ ತಂದ ಮೋದಿಯವರ ಕಾರ್ಯ ದೇಶ ವಿದೇಶಗಳಲ್ಲಿನ ಜನತೆ ಕಂಡು ನಿಬ್ಬೆರಗಾಗಿದ್ದಾರೆ. ಈ ಬಾರಿ ಬಿಜೆಪಿ ಮೂರನೇ ಬಾರಿಗೆ ಅತ್ಯಂತ ಬಹುಮತದೊಂದಿಗೆ ಮತ್ತೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ ಎಂದರು. ಮುಖಂಡರಾದ ಎಸ್.ಎಸ್. ಪಾಟೀಲ, ಲಿಂಗರಾಜ ಚಪ್ಪರದಳ್ಳಿ, ಆರ್.ಎನ್. ಗಂಗೋಳ, ರವಿಶಂಕರ ಬಾಳಿಕಾಯಿ, ಬಸನಗೌಡ ಸಿದ್ದಪ್ಪಗೌಡ್ರ, ಬಸವರಾಜ ದೊಡ್ಡಗೌಡ್ರ, ಜಗದೀಶ ದೊಡ್ಡಗೌಡ್ರ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.