ಜೂನ್ ತಿಂಗಳ ಅಂತ್ಯದ ವಾರದಲ್ಲಿ ಮಂಡ್ಯ ಜಿಲ್ಲೆಯ 7 ತಾಲೂಕುಗಳ ಕೇಂದ್ರಸ್ಥಾನಗಳಲ್ಲಿ ಪಂಚಶೀಲ ಪಾದಯಾತ್ರೆ ಸಂಚರಿಸಲಿದೆ. ಸ್ಥಳೀಯ ಬೌದ್ಧ ಧಮ್ಮ ಉಪಾಸಕರು ಮತ್ತು ಭೋದಿಸತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳು ಪಾಲ್ಗೊಂಡು ಸ್ವಾಗತಿಸಿ, ಯಶಸ್ವಿಗೆ ಸಹಕಾರ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂದಿನ ತಿಂಗಳು ಜಿಲ್ಲೆಯಲ್ಲಿ ಪಂಚಶೀಲ ಪಾದಯಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಲ್ಲಿ ಜಿಲ್ಲಾ ಬೌದ್ಧ ಧಮ್ಮ ಉಪಾಸಕರು, ಮುಖಂಡರು ಸಭೆ ನಡೆಸಿದರು.

ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯ ಕಾರ್ಯದರ್ಶಿ ಬಂತೇ ಬೋಧಿದತ್ತ ತೇರಾ ಮಾತನಾಡಿ, ಜೂನ್ ತಿಂಗಳ ಅಂತ್ಯದ ವಾರದಲ್ಲಿ ಮಂಡ್ಯ ಜಿಲ್ಲೆಯ 7 ತಾಲೂಕುಗಳ ಕೇಂದ್ರಸ್ಥಾನಗಳಲ್ಲಿ ಪಂಚಶೀಲ ಪಾದಯಾತ್ರೆ ಸಂಚರಿಸಲಿದೆ. ಸ್ಥಳೀಯ ಬೌದ್ಧ ಧಮ್ಮ ಉಪಾಸಕರು ಮತ್ತು ಭೋದಿಸತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳು ಪಾಲ್ಗೊಂಡು ಸ್ವಾಗತಿಸಿ, ಯಶಸ್ವಿಗೆ ಸಹಕಾರ ನೀಡಲಿದ್ದಾರೆ ಎಂದು ನುಡಿದರು.

ಭಾರತೀಯ ಬೌದ್ಧ ಮಹಾಸಭಾ ಸಂಚಾಲಕ ಶಿವರಾಜ್, ಬೌದ್ಧ ಉಪಾಸಕರಾದ ವೆಂಕಟಗಿರಿಯಯ್ಯ, ನಾರಾಯಣಸ್ವಾಮಿ, ಡಾ.ಸುರೇಶ್, ಡಯಟ್‌ ಗುರುಮೂರ್ತಿ, ಚಲುವಯ್ಯ, ಮೋಹನ್‌ ಚಿಕ್ಕಮಂಡ್ಯ, ವೃದ್ದಾಶ್ರಮದ ಮುಖ್ಯಸ್ಥೆ ಡಿ.ಎಂ.ಪ್ರೀತಿ, ಕೆ.ಸಿದ್ದಯ್ಯ, ವೆಂಕಟೇಶ್, ಚಂದ್ರಶೇಖರ್, ಬಸವರಾಜು, ಅಶ್ವಥ್, ಪ್ರೊ.ಎಂ.ವೆಂಕಟೇಶ್, ಅನ್ನದಾನಿ ಮತ್ತಿತರರಿದ್ದರು.

ರಾಜ್ಯಸಭೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುನರಾಯ್ಕೆಗೆ ಮನವಿ

ಮಂಡ್ಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ರಾಜ್ಯಸಭೆಗೆ ಪುನರಾಯ್ಕೆ ಮಾಡಲು ಎನ್‌ಡಿಎ ಮೈತ್ರಿಕೂಟ ಮುಂದಾಗಬೇಕು ಎಂದು ಜಾತ್ಯತೀತ ಜನತಾದಳ ಪರಿಶಿಷ್ಟ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಲ್.ತುಳಸೀಧರ್ ಮನವಿ ಮಾಡಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಎಚ್.ಡಿ.ದೇವೇಗೌಡರ ರಾಜ್ಯಸಭಾ ಸದಸ್ಯತ್ವ ಮುಂದಿನ ಜೂನ್ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಆದರೆ, ರಾಜ್ಯಸಭೆಗೆ ಅನುಭವಿ ಮತ್ತು ಮುಸ್ಥದಿ ರಾಜಕಾರಣಿ ಮಾಜಿ ಪ್ರಧಾನಿಗಳ ಅಗತ್ಯತೆ ಹೆಚ್ಚಾಗಿದೆ ಎಂಬುದು ಪ್ರತಿಯೊಬ್ಬರಿಗೂ ಮನದಟ್ಟಾಗಿರುತ್ತದೆ ಎಂದಿದ್ದಾರೆ.

ಸಂಸತ್ತಿನಲ್ಲಿ ಕರ್ನಾಟಕ ಮತ್ತು ದೇಶದ ಹಿತ ಬಯಸಿ ಸಮರ್ಥವಾಗಿ ಧ್ವನಿ ಎತ್ತುವ ನಾಯಕರಾಗಿರುವ ದೇವೇಗೌಡರು, ರೈತರು, ಕಾರ್ಮಿಕರು, ಕೃಷಿ ಕೂಲಿಕಾರರು ಸೇರಿದಂತೆ ಕನ್ನಡಿಗರ ಪರ ಸದಾಕಾಲ ಹೋರಾಡುತ್ತಾರೆ ಎಂದು ತಿಳಿಸಿದ್ದಾರೆ.ಕುಡಿಯುವ ನೀರಿನ ಬಿಕ್ಕಟ್ಟಿನ ಬಗ್ಗೆ ರಾಜ್ಯ ಸಭೆಯಲ್ಲಿ ಸರ್ಕಾರದ ಗಮನ ಸೆಳೆದು, ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕರ್ನಾಟಕದ ಪಾಲಿಗೆ ಇವರ ರಾಷ್ಟ್ರೀಯ ನಾಯಕತ್ವ ಮೈಲುಗಲ್ಲು, ರಾಜ್ಯ ಮತ್ತು ಕೇಂದ್ರದ ನಡುವೆ ಸಂಪರ್ಕದ ಕೊಂಡಿಯಂತಿರುವ ಎಚ್.ಡಿ.ದೇವೇಗೌಡರು ಮುಂದಿನ ದಿನಗಳಲ್ಲಿಯೂ ಸಂಸತ್ತಿನಲ್ಲಿ ಇದ್ದರೆ ಮೇಕೆದಾಟು ಯೋಜನೆ ಜಾರಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುವ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಎಚ್.ಡಿ. ದೇವೇಗೌಡರನ್ನು ಜೆಡಿಎಸ್ ನಾಯಕರು ಎಂದು ಪರಿಗಣಿಸದೆ ನಾಡಿನ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯಸಭೆಗೆ ಮತ್ತೊಂದು ಅವಧಿಗೆ ಪುನರಾಯ್ಕೆ ಮಾಡಲು ಬಿಜೆಪಿ ಪಕ್ಷ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.