ಸಾರಾಂಶ
ಜಿಲ್ಲೆಯ ಎಲ್ಲಾ ವಕೀಲ ಮಿತ್ರರು ಸ್ವಾಭಿಮಾನದ ಹುಡುಗ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸುವಂತೆ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಲ್.ಪಿ.ಪ್ರಕಾಶ್‌ಗೌಡ ಮನವಿ ಮಾಡಿದರು. ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರ ಸಭೆಯಲ್ಲಿ ವಕೀಲರಿಗೆ ಮತಯಾಚನೆ ಮಾಡಿ ಮಾತನಾಡಿದರು.
ಕಾಂಗ್ರೆಸ್ ಪರ ಪ್ರಚಾರ
ಚನ್ನರಾಯಪಟ್ಟಣ: ಜಿಲ್ಲೆಯ ಎಲ್ಲಾ ವಕೀಲ ಮಿತ್ರರು ಸ್ವಾಭಿಮಾನದ ಹುಡುಗ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸುವಂತೆ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಲ್.ಪಿ.ಪ್ರಕಾಶ್‌ಗೌಡ ಮನವಿ ಮಾಡಿದರು.ಪಟ್ಟಣದ ವಕೀಲರ ಭವನದಲ್ಲಿ ಸೊಮವಾರ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರ ಸಭೆಯಲ್ಲಿ ವಕೀಲರಿಗೆ ಮತಯಾಚನೆ ಮಾಡಿ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಸ್ವಾಭಿಮಾನದ ಜನರು ಇದ್ದು ರಾಜಕೀಯವಾಗಿ ಜಿಲ್ಲೆಗೆ ಅತಿ ಹೆಚ್ಚು ಕೊಡುಗೆ ನೀಡಿರುವುದು ಕಾಂಗ್ರೆಸ್ ಪಕ್ಷ, ತಾಲೂಕಿನ ವಕೀಲರ ಭವನವನ್ನು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡರು ತಮ್ಮ ಅನುದಾನದಲ್ಲಿ ಕಟ್ಟಿಸಿಕೊಟ್ಟಿದ್ದಾರೆ, ಅವರ ಚಿಂತನೆ ದೂರದೃಷ್ಟಿಗೆ ಮಾದರಿಯಾಗಿದೆ. ಬಿಜೆಪಿ ಈ ಬಾರಿ ಅಭ್ಯರ್ಥಿಯನ್ನು ಹಾಕಿಲ್ಲ ಬದಲಿಗೆ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.
ಶ್ರೇಯಸ್ ಪಟೇಲ್ ಒಬ್ಬ ಒಳ್ಳೆಯ ಹುಡುಗ. ಒಬ್ಬ ಮಾಜಿ ಪ್ರಧಾನಿಯ ಮೊಮ್ಮಗನ ವಿರುದ್ಧ ಚುನಾವಣೆಗೆ ನಿಲ್ಲುವುದು ಅಷ್ಟು ಸುಲಭವಲ್ಲ ಅಂತಹ ಧೈರ್ಯ ಮಾಡಿರುವ ಶ್ರೇಯಸ್ ಪಟೇಲ್‌ಗೆ ತಾಯಿ ಅನುಮಪ ಅವರ ಶ್ರೀರಕ್ಷೆ ಇದೆ. ಜತೆಗೆ ಜಿಲ್ಲೆಯ ಜನರು ಈ ಬಾರಿ ಕುಟುಂಬ ರಾಜಕಾರಣವನ್ನು ಸೋಲಿಸಿ ಒಬ್ಬ ಪ್ರಮಾಣಿಕ ಹುಡುಗನನ್ನು ದೆಹಲಿಗೆ ಕಳುಹಿಸಲು ಸಹಕರಿಸಲಿದ್ದಾರೆ ಎಂದರು.ವಕೀಲರ ಸಂಘದ ವತಿಯಿಂದ ಶ್ರೇಯಸ್ ಪಟೇಲ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡರಾದ ಜತ್ತೇನಹಳ್ಳಿ ರಾಮಚಂದ್ರು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಶಂಕರ್, ಪಿ.ಎ.ಮಂಜೇಗೌಡ, ಎನ್.ಡಿ.ಕಿಶೋರ್, ವಕೀಲರ ಸಂಘದ ಅಧ್ಯಕ್ಷ ಡಿ.ಎ.ವಾಸು, ಬಿ.ವಿ.ವಿಜಯ್, ಚಲ್ಯ ರಾಘವೇಂದ್ರ, ನವೀನ್, ಗಿರೀಶ್, ದೇವಿಗೆರೆ ಬಸವರಾಜ್, ಕಗ್ಗೆರೆಕುಮಾರ್, ಉಮೇಶ್ ದೊಡ್ಡೇರಿ, ಎಸ್.ಎಸ್.ಪರಮೇಶ್ ಮತ್ತಿತರಿದ್ದರು.ಚನ್ನರಾಯಪಟ್ಟಣದ ವಕೀಲರ ಭವನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮತಯಾಚನೆ.