ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳ ವಿರುದ್ಧ ದುಡಿಯುವ ಜನರ ಹಕ್ಕುಗಳ ಉಳಿವಿಗಾಗಿ ಜು.9ರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ಮಳವಳ್ಳಿಯಲ್ಲೂ ಹೋರಾಟ ನಡೆಸಲಾಗುವುದು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತಿಳಿಸಿದೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಮಿತಿ ಮುಖಂಡ ಜಿ.ರಾಮಕೃಷ್ಣ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಕಾರ್ಮಿಕರನ್ನು ಕಾರ್ಪೋರೇಟ್ ಕಂಪನಿಗಳ ಗುಲಾಮರನ್ನಾಗಿ ಮಾಡಲು ಕಾನೂನುಗಳನ್ನು ರೂಪಿಸಲು ಕೇಂದ್ರ ಸರ್ಕಾರ ಹೊರಟಿದೆ. ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಏರಿಕೆ ಮಾಡುವುದು ಸರಿಯಲ್ಲ. ನಮ್ಮ ಹೋರಾಟದ ಹಕ್ಕನ್ನು ಕಸಿದುಕೊಳ್ಳಲು ನಾಲ್ಕು ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ ಎಂದು ಆರೋಪಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ರೈತರ ಹಿತ ಕಾಯದಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇವನಹಳ್ಳಿ ಸುತ್ತಮುತ್ತ ರೈತರ 1700 ಎಕರೆ ಕೃಷಿ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯಲು ಮುಂದಾಗಿವೆ. ಈ ಭೂ-ಸ್ವಾಧೀನವನ್ನು ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಐಟಿಯುನ ಮಹದೇವಮ್ಮ ಮಾತನಾಡಿ, ಬಿಸಿಯೂಟ ಸೇರಿದಂತೆ ಕೆಲ ಯೋಜನೆಗಳಲ್ಲಿ ಗೌರವಧನದ ಆಧಾರಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಭದ್ರತೆ ಹಾಗೂ ಸರಿಯಾದ ವೇತನ ಸಿಗುತ್ತಿಲ್ಲ. ಅವರಿಗೆ ಸೂಕ್ತ ಭದ್ರತೆ ಜೊತೆಗೆ ನ್ಯಾಯಯುತ ವೇತನಕ್ಕಾಗಿ ಆಗ್ರಹಿಸಿ ಜು.9ರ ಮುಷ್ಕರದಲ್ಲಿ ಎಲ್ಲ ನೌಕರರು ಪಾಲ್ಗೊಳ್ಳಬೇಕು ಎಂದರು.
ಮುಷ್ಕರದ ಭಾಗವಾಗಿ ಎಲ್ಲ ನೌಕರರು, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ತಾಪಂ ಕಚೇರಿ ಆವರಣದಿಂದ ಮೆರವಣಿಗೆಯಲ್ಲಿ ಅನಂತ್ ರಾಂ ವೃತ್ತದ ಆಗಮಿಸಬೇಕು. ಪ್ರತಿಭಟನೆ ನಡೆಸುವ ಮೂಲಕ ಬಂಧನಕ್ಕೆ ಒಳಗಾಗಲಿದ್ದು ಎಲ್ಲ ನೌಕರರು ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಮುಷ್ಕರವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಸಿಐಟಿಯು ತಾಲೂಕು ಸಂಚಾಲಕ ಎಚ್.ಕೆ.ತಿಮ್ಮೇಗೌಡ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಲತಾ, ರೈತ ಮುಖಂಡರಾದ ರಘು, ದೊಡ್ಡಮರಿಗೌಡ ಮತ್ತಿತರರು ಹಾಜರಿದ್ದರು.