ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲ ಶೂ ಎಸೆತಕ್ಕೆ ಖಂಡನೆ

| Published : Oct 09 2025, 02:00 AM IST

ಸಾರಾಂಶ

ಶೋಷಿತ ಸಮುದಾಯಕ್ಕೆ ಸೇರಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಮನುವಾದಿ ಮನಸ್ಥಿತಿ ವಕೀಲ ಶೂ ಎಸೆದಿರುವ ಘಟನೆ ಅತ್ಯಂತ ಹೇಯ ಕೃತ್ಯ. ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವ ಸಂಗತಿ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲ ಶೂ ಎಸೆದಿರುವ ಘಟನೆ ಖಂಡಿಸಿ ದಲಿತ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆಗೆ ಚಾಲನೆ ನೀಡಿ ರಸ್ತೆ ಉದ್ದಕ್ಕೂ ಶೂ ಎಸೆದ ವಕೀಲನ ವಿರುದ್ಧ ಘೋಷಣೆ ಕೂಗುತ್ತಾ ತಾಪಂ ಕಚೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ಈ ವೇಳೆ ನಿವೃತ್ತ ಪ್ರಾಧ್ಯಾಪಕ ಪ್ರೊ.ರಂಗಸ್ವಾಮಿ ಮಾತನಾಡಿ, ಶೋಷಿತ ಸಮುದಾಯಕ್ಕೆ ಸೇರಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಮನುವಾದಿ ಮನಸ್ಥಿತಿ ವಕೀಲ ಶೂ ಎಸೆದಿರುವ ಘಟನೆ ಅತ್ಯಂತ ಹೇಯ ಕೃತ್ಯ. ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವ ಸಂಗತಿ ಎಂದು ಆಕ್ರೋಶ ವ್ಯಕ್ತಡಿಸಿದರು.

ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸದಸ್ಯ ಎಂ.ಎನ್ ಜಯರಾಜು ಮಾತನಾಡಿ, ಇದು ಆರ್‌ಎಸ್‌ಎಸ್‌ನ ವ್ಯವಸ್ಥಿತ ಪಿತೂರಿ. ಗವಾಯಿ ಅವರ ತಾಯಿಯನ್ನು ನಾಗಪುರದ ಆರ್ ಎಸ್ ಎಸ್ ಸಭೆಗೆ ಆಹ್ವಾನಿಸಿ ಅವರಿಂದಲೇ ಆರ್‌ಎಸ್‌ಎಸ್ ಹೊಗಳಿಸುವ ಸಂಚು ವಿಫಲವಾದ ನಂತರ ನ್ಯಾಯಮೂರ್ತಿಗಳನ್ನು ಅಪಮಾನ ಮಾಡುವ ಉದ್ದೇಶದಿಂದ ಅವರ ಮೇಲೆ ಮನುವಾದಿ ವಕೀಲನ ಮೂಲಕ ಶೂ ಎಸೆಯಲಾಗಿದೆ ಎಂದು ಕಿಡಿಕಾರಿದರು.

ಪ್ರಾಂತ ರೈತ ಸಂಘದ ಅಧ್ಯಕ್ಷ ಭರತ್‌ರಾಜ್ ಮಾತನಾಡಿ, ಶೂದ್ರ ವರ್ಗದವರು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಬಾರದು ಎಂಬ ಕಾರಣಕ್ಕಾಗಿ ಮನುವಾದಿಗಳು ಇಂತಹ ಕೃತ್ಯಕ್ಕೆ ಕೈಹಾಕಲಾಗಿದೆ. ಘಟನೆ ಈ ದೇಶದ ಘನತೆಗೆ ದೊಡ್ಡ ಕಳಂಕವಾಗಿದೆ. ಇದನ್ನು ತಕ್ಷಣ ಖಂಡಿಸಬೇಕಾದ ಪ್ರಧಾನಿ ಮೋದಿ ವ್ಯಂಗ್ಯಾರ್ಥದ ಹೇಳಿಕೆ ನೀಡಿರುವುದು ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದರು.

ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಡಾ.ಲೋಕೇಶ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಹಾಡ್ಲಿ ಸುರೇಶ್, ದ್ಯಾವಪಟ್ಟಣ ಯತೀಶ್, ಕಾಂತರಾಜು, ಪಂಡಿತಹಳ್ಳಿ ಸುರೇಶ್, ಚೇತನ್ ಕುಮಾರ್, ಬಿಎಸ್ಪಿ, ನಂಜುಂಡಸ್ವಾಮಿ, ಜನವಾದಿ ಮಹಿಳಾ ಸಂಘಟನೆಯ ಸುಶೀಲಾ, ಜಯಶೀಲ, ಮತ್ತಿತರರು ಪಾಲ್ಗೊಂಡಿದ್ದರು.