ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ದಸಂಸ ಪ್ರತಿಭಟನೆ

| Published : Oct 09 2025, 02:01 AM IST

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ದಸಂಸ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆತ ಪ್ರಕರಣ ನಡೆದಿದೆ.

ಬಳ್ಳಾರಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಕರಣವನ್ನು ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆತ ಪ್ರಕರಣ ನಡೆದಿದ್ದು ಮನುವಾದಿ ಸಂಸ್ಕೃತಿಯ ವಕೀಲನೊಬ್ಬ ನಡೆದುಕೊಂಡ ನಿರ್ಧಾರದಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಈ ಘಟನೆ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡಿದೆ. ಇತ್ತೀಚೆಗೆ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಭಾಗವಹಿಸಲು ನಿರಾಕರಿಸಿದ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರು ಖಜುರಾವೋ ದೇವಾಲಯದ ಪ್ರಕರಣವನ್ನು ಪ್ರಚಾರಕ್ಕಾಗಿ ಕೋರ್ಟ್ ಗೆ ತರಬೇಡಿ ಎಂದು ಸೂಚಿಸಿದ್ದರು. ಈ ಬೆಳವಣಿಗೆ ಹಿಂದೆಯೇ ಮನುವಾದಿ ಮನಸ್ಥಿತಿಯ ವಕೀಲನೊಬ್ಬ ಶೂ ಎಸೆಯುವ ದುಷ್ಕೃತ್ಯ ಎಸಗಿದ್ದಾನೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದಿರುವ ಈ ದಾಳಿ ಅತ್ಯಂತ ಖಂಡನೀಯವಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಅಪಮಾನ ಮಾಡಿರುವ ಆರೋಪಿ ವಕೀಲನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಮಾತನಾಡಿ, ಶೂ ಎಸೆತ ಪ್ರಕರಣ ಸಂವಿಧಾನದ ಮೇಲೆ ಹಾಗೂ ದೇಶದ ಅಖಂಡಂತೆಯ ಮೇಲೆ ನಡೆದ ದಾಳಿಯಾಗಿದೆ. ಕೃತ್ಯ ಎಸಗಿದ ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಉನ್ನತ ತನಿಖೆ ಕೈಗೊಂಡು ಘಟನೆಯ ಹಿಂದಿರುವ ದ್ರೋಹಿಗಳನ್ನು ಸಹ ಬಂಧಿಸಬೇಕು ಎಂದು ಒತ್ತಾಯಿಸಿದರು.

ಮೋತಿ ವೃತ್ತದಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು, ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಕಳುಹಿಸಿದರು. ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಮನವಿ ಸ್ವೀಕರಿಸಿದರು. ಶೋಷಿತ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ಪಿ.ಎಲ್. ಗಾದಿಲಿಂಗನಗೌಡ, ವಾಲ್ಮೀಕಿ ಸಮಾಜದ ಮುಖಂಡ ವಿ.ಎಸ್. ಶಿವಶಂಕರ್, ಛಲವಾದಿ ಮಹಾಸಭಾದ ಮುಖಂಡ ನರಸಪ್ಪ, ಜಿಲ್ಲಾ ಬಂಜಾರ ಸಮುದಾಯದ ಅಧ್ಯಕ್ಷ ರಾಮಾನಾಯ್ಕ, ಎಂ.ಕೆ. ಗೋವಿಂದಬಾಬು, ಉಪನ್ಯಾಸಕ ಡಾ.ಟಿ.ದುರುಗಪ್ಪ, ಸಿದ್ದೇಶ್, ಎಚ್‌.ಬಿ. ಗಂಗಪ್ಪ, ಕೆ.ದೇವದಾಸ್, ಎಚ್.ಆಂಜಿನೇಯ, ಬೆಳಗಲ್ಲು ಹುಲುಗಪ್ಪ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅಂಬೇಡ್ಕರ್ ಸಂಘ ಪ್ರತಿಭಟನೆ: ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದಿರುವ ವಕೀಲನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಡಾ.ಬಿ.ಆರ್‌. ಅಂಬೇಡ್ಕರ್ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

ಜಾತಿ ಮೂಲದ ಅಸಮಾನತೆ, ಅಸಹನೆ ಸಂವಿಧಾನ ಜಾರಿಗೆ ಬಂದು 75 ವರ್ಷಗಳ ಬಳಿಕವೂ ಮನುವಾದಿಗಳ ಮನಸ್ಸಿನಲ್ಲಿ ಭದ್ರವಾಗಿ ಬೇರೂರಿದೆ ಎಂಬುದಕ್ಕೆ ಶೂ ಎಸೆತ ಪ್ರಕರಣವೇ ಸಾಕ್ಷಿ. ನ್ಯಾಯಮೂರ್ತಿ ಬಿ.ಆರ್‌.ಗವಾಯಿಗಳು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಆಶಯ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಸಂಖ್ಯೆ ಜಾತ್ಯಾತೀತ ಮನಸ್ಸುಗಳು ಅವರ ಬೆಂಬಲಕ್ಕೆ ಇವೆ. ಕೂಡಲೇ ಆರೋಪಿಯಾದ ವಕೀಲ ರಾಕೇಶ ಕಿಶೋರ ಎಂಬಾತನನ್ನು ಕೂಡಲೇ ಬಂಧಿಸಬೇಕು. ನ್ಯಾಯಾಂಗ ವ್ಯವಸ್ಥೆಯ ಗೌರವ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಕೆ.ಅನಂತಕುಮಾರ್, ಮುಖಂಡರಾದ ರಾಜೇಶ್, ಮಲ್ಲೇಶ್ವರಿ, ಕೆ.ಹುಲಿಯಪ್ಪ, ಗಾದಿಲಿಂಗಪ್ಪ, ಜಿ.ನಾಗಪ್ಪ ಸೇರಿದಂತೆ ಸಂಘದ ಜಿಲ್ಲಾ ಸಮಿತಿ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.