ಸಾರಾಂಶ
ಭಾರತೀಯ ಸೇನೆ ಕುರಿತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು ಅಸಮಂಜಸವಾಗಿದ್ದು, ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬಕ್ಕೆ ಅಪಮಾನ ಮಾಡಿದಂತಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರತೀಯ ಸೇನೆ ಕುರಿತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು ಅಸಮಂಜಸವಾಗಿದ್ದು, ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬಕ್ಕೆ ಅಪಮಾನ ಮಾಡಿದಂತಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಕಾಶ್ ರಾಥೋಡ್, ಮಾಜಿ ಸಂಸದ ಚಂದ್ರಪ್ಪ, ಹಿರಿಯ ವಕೀಲರಾದ ಸಿ.ಎಸ್.ದ್ವಾರಕಾನಾಥ್ ಮತ್ತಿತರರು, ರಾಹುಲ್‌ಗಾಂಧಿ ಕುರಿತು ಸುಪ್ರೀಂ ಕೋರ್ಟ್ ಹೇಳಿರುವ ಮಾತುಗಳು ಅಚ್ಚರಿ ಹಾಗೂ ನೋವು ತಂದಿದೆ ಎಂದರು.
ವಿ.ಎಸ್.ಉಗ್ರಪ್ಪ ಮಾತನಾಡಿ ದೇಶಕ್ಕಾಗಿ ನೆಹರು, ಇಂದಿರಾಗಾಂಧಿ ಕುಟುಂಬ ದೊಡ್ಡ ತ್ಯಾಗ ಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು ಅವರು ಅನೇಕ ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಬಲಿದಾನ ಅಗಿದೆ. ರಾಹುಲ್ ಗಾಂಧಿ ಅವರು ದೇಶದ ಏಕತೆ ಸಮಗ್ರತೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಮಾಡಿದರು. ದೇಶದ ಹಿತ ಇಟ್ಟುಕೊಂಡು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರಿಗೆ ಸರ್ವೋಚ್ಚ ನ್ಯಾಯಾಲಯ ನೀವು ನಿಜವಾದ ಭಾರತೀಯರೇ ಎಂದು ಪ್ರಶ್ನಿಸಿರುವುದು ಅಚ್ಚರಿ ಮೂಡಿಸಿದೆ ಎಂದರು.ರಾಹುಲ್ ಗಾಂಧಿ ಕುರಿತ ಹೇಳಿಕೆಗೆ ತಾವು ನ್ಯಾಯಾಧೀಶರನ್ನು ಪ್ರಶ್ನಿಸುತ್ತಿಲ್ಲ. ದೇಶದ ಜನರ ನೋವನ್ನು ತಿಳಿದುಕೊಳ್ಳಬೇಕು, ತ್ಯಾಗ ಮಾಡಿರುವ ಕುಟುಂಬದ ವ್ಯಕ್ತಿ ಕುರಿತು ಹೇಳಿರುವುದು ಸರಿಯಿಲ್ಲ ಎಂಬುದಷ್ಟೇ ನನ್ನ ಅಭಿಪ್ರಾಯ ಎಂದರು.
ಪ್ರಕಾಶ್ ರಾಥೋಡ್ ಮಾತನಾಡಿ, ಅರುಣಾಚಲ ಪ್ರದೇಶದ ಬಿಜೆಪಿ ಸಂಸದರು ಚೀನಾ ಅತಿಕ್ರಮಣದ ಬಗ್ಗೆ ಸಂಸತ್ತನಲ್ಲಿ ಮಾತಾಡಿದ್ದಾರೆ, ಆದರೆ ಸರ್ವೋಚ್ಚ ನ್ಯಾಯಾಲಯ ಇದನ್ನು ಪರಿಗಣಿಸದೆ ರಾಹುಲ್ ಗಾಂಧಿ ಅವರನ್ನು ಪ್ರಶ್ನೆ ಮಾಡಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.