ನಾಳೆಯಿಂದ ಸೂರಗೊಂಡನಕೊಪ್ಪ ಸಂತ ಸೇವಾಲಾಲ್‌ ಜಯಂತಿ: ರಾಘವೇಂದ್ರ ನಾಯ್ಕ

| Published : Feb 12 2024, 01:31 AM IST

ನಾಳೆಯಿಂದ ಸೂರಗೊಂಡನಕೊಪ್ಪ ಸಂತ ಸೇವಾಲಾಲ್‌ ಜಯಂತಿ: ರಾಘವೇಂದ್ರ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

14ರಂದು ಪೂರ್ಣಕುಂಭ ಮೆರವಣಿಗೆ, ಮಾತಾ ಮರಿಯಮ್ಮ ದೇವಿಗೆ ಅಭಿಷೇಕ, ಅಲಂಕಾರ, ಸಂತ ಸೇವಾಲಾಲ್‌ ಮೂರ್ತಿಗೆ ಅಭಿಷೇಕ, ಅಲಂಕಾರ, ಉಭಯ ದೇವಸ್ಥಾನಗಳಲ್ಲಿ ವಾಜಾ ಭಜನ್‌, ಸಮುದಾಯದ ಸಾಮೂಹಿಕ ಪ್ರಾರ್ಥನೆ, ಆಗಮಿತ ಮಾಲಾಧಾರಿಗಳಿಗೆ ದರ್ಶನ ಹಾಗೂ ಸೇವಾ ಸಂದೇಶ, ಮಹಾ ಮಂಗಳಾರತಿ, ಉತ್ಸವ ಮೂರ್ತಿಯ ಪ್ರತಿಷ್ಟಾಪನೆಯೊಂದಿಗೆ ಪಲ್ಲಕ್ಕಿ ಉತ್ಸವ, ನಿರಂತರವಾಗಿ ಮಾಲಾಧಾರಿಗಳಿಂದ ಮಾಲೆ ಇರುಮುಡಿಗಳ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಂಜಾರ ಸಮುದಾಯದ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲ್‌ರ 285ನೇ ಜಯಂತಿ ಫೆ.13ರಿಂದ 15ರವರೆಗೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಸುಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಮುಖಂಡ, ಹಿರಿಯ ವಕೀಲ ಕೆ.ರಾಘವೇಂದ್ರ ನಾಯ್ಕ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ‌.13ಕ್ಕೆ ಕಾಟಿ ಆರೋಹಣ, ತಾಂಡಾ ಸಾಂಪ್ರದಾಯಿಕ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳು, ಸತ್ಸಂಗ, ವಾಜಾ ಭಜನೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಗೋವಾ ಸೇರಿ ದೇಶದ ವಿವಿಧೆಡೆಯಿಂದ ಬಂಜಾರ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದರು.

ಫೆ.14ರ ಮಧ್ಯಾಹ್ನ 2.30ಕ್ಕೆ ಸಂತ ಸೇವಾಲಾಲ್‌ರ ಜಯಂತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವರು. ಸಚಿವರಾದ ಎಚ್.ಕೆ.ಪಾಟೀಲ್‌, ಡಾ.ಎಚ್.ಸಿ.ಮಹದೇವಪ್ಪ, ಸತೀಶ ಜಾರಕಿಹೊಳಿ, ಎಸ್.ಎಸ್.ಮಲ್ಲಿಕಾರ್ಜುನ, ಮಧು ಬಂಗಾರಪ್ಪ, ಮಹಾರಾಷ್ಟ್ರದ ಸಚಿವರಾದ ಸಂಜಯ್ ಡಿ.ರಾಥೋಡ್‌, ವಿಪಕ್ಷ ನಾಯಕ ಆರ್.ಅಶೋಕ, ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ, ಬಿ.ವೈ.ರಾಘವೇಂದ್ರ, ಡಾ.ಉಮೇಶ ಜಾಧವ್‌ ಭಾಗವಹಿಸಲಿದ್ದು, ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

14ರಂದು ಪೂರ್ಣಕುಂಭ ಮೆರವಣಿಗೆ, ಮಾತಾ ಮರಿಯಮ್ಮ ದೇವಿಗೆ ಅಭಿಷೇಕ, ಅಲಂಕಾರ, ಸಂತ ಸೇವಾಲಾಲ್‌ ಮೂರ್ತಿಗೆ ಅಭಿಷೇಕ, ಅಲಂಕಾರ, ಉಭಯ ದೇವಸ್ಥಾನಗಳಲ್ಲಿ ವಾಜಾ ಭಜನ್‌, ಸಮುದಾಯದ ಸಾಮೂಹಿಕ ಪ್ರಾರ್ಥನೆ, ಆಗಮಿತ ಮಾಲಾಧಾರಿಗಳಿಗೆ ದರ್ಶನ ಹಾಗೂ ಸೇವಾ ಸಂದೇಶ, ಮಹಾ ಮಂಗಳಾರತಿ, ಉತ್ಸವ ಮೂರ್ತಿಯ ಪ್ರತಿಷ್ಟಾಪನೆಯೊಂದಿಗೆ ಪಲ್ಲಕ್ಕಿ ಉತ್ಸವ, ನಿರಂತರವಾಗಿ ಮಾಲಾಧಾರಿಗಳಿಂದ ಮಾಲೆ ಇರುಮುಡಿಗಳ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸುಮಾರು 5 ಲಕ್ಷಕ್ಕೂ ಅಧಿಕ ಬಂಜಾರ ಬಾಂಧವರು ಮೂರೂ ದಿನಗಳ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಶ್ರೀಕ್ಷೇತ್ರಕ್ಕೆ ಬರುವ ಭಕ್ತ ಜನರಿಗೆ ತೊಂದರೆಯಾಗದಂತೆ ಎಲ್ಲಾ ಅಗತ್ಯ ಸೌಲಭ್ಯಗಳ ಕಲ್ಪಿಸುವಂತೆ ಜಿಲ್ಲಾಡಳಿತದೊಂದಿಗೆ ಅನೇಕ ಸಭೆ ನಡೆಸಲಾಗಿದೆ. ಭಕ್ತರಿಗೆ ಅನಾನುಕೂಲ ಆಗದಂತೆ ಊಟ, ವಸತಿ, ಸಾರಿಗೆ ಹೀಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿವಿಧ ಭಾಗಗಳ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುವರು. ಬಂಜಾರ ಸಮಾಜದ ಕಲೆ, ಸಂಸ್ಕೃತಿಯ ಅನಾವರಣ ಅಲ್ಲಿ ಆಗಲಿದೆ ಎಂದು ಹೇಳಿದರು.

ಜನ್ಮಸ್ಥಾನ ಮಹಾಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಎನ್.ಹನುಮಂತ ನಾಯ್ಕ, ಸಮಾಜದ ಮುಖಂಡರಾದ ಎನ್‌.ಜಯದೇವ ನಾಯ್ಕ, ಹನುಮಂತ ನಾಯ್ಕ, ಜಿ.ಮಂಜಾನಾಯ್ಕ, ಜಿ.ಚಂದ್ರಾನಾಯ್ಕ, ನಂಜಾನಾಯ್ಕ ಇತರರಿದ್ದರು.

ಜಾತ್ರೆಗೆ ವಿಶೇಷ ಬಸ್‌ ಸೌಲಭ್ಯ

ರಾಜ್ಯ ರಸ್ತೆ ಸಾರಿಗೆ ಸಂಸ್ತೆಯಿಂದ ಹಾವೇರಿ, ದಾವಣೆಗರೆ, ಶಿವಮೊಗ್ಗದಿಂದ ಸೂರಗೊಂಡನಕೊಪ್ಪಕ್ಕೆ ವಿಶೇಷ ಜಾತ್ರಾ ಬಸ್‌ಗಳ ಸೇವೆ ಕಲ್ಪಿಸಲಿದೆ. ಲಾರಿ, ಬಸ್ಸು, ಟ್ರ್ಯಾಕ್ಟರ್ ಸೇರಿ ಭಾರೀ ವಾಹನಗಳು ನ್ಯಾಮತಿ ತಾಲೂಕಿನ ಹೊಸ ಜೋಗದ ಮಾರ್ಗವಾಗಿ ಪ್ರವೇಶಿಸಬೇಕು. ದಾವಣಗೆರೆ, ಶಿವಮೊಗ್ಗ, ಶಿಕಾರಿಪುರ, ಹಾವೇರಿ ಭಾಗ ಹೀಗೆ ನಾಲ್ಕೂ ಕಡೆಯಿಂದಲೂ ಸಾರಿಗೆ ಸೌಕರ್ಯ ಕಲ್ಪಿಸಲಾಗಿದೆ ಎಂದು ಕೆ.ರಾಘವೇಂದ್ರ ನಾಯ್ಕ ಮನವಿ ಮಾಡಿದರು.