ಹಜ್ ಯಾತ್ರಾರ್ಥಿಗಳಿಗೆ ಸುರಕ್ಷಾ ಲಸಿಕಾ ಕಾರ್ಡ್

| Published : May 01 2024, 01:21 AM IST

ಸಾರಾಂಶ

ನಗರದ ಎಂ.ಕೆ.ಪ್ಯಾಲೇಸ್ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿರ್ದೇಶನದಂತೆ ಜಿಲ್ಲೆಯ ಒಟ್ಟು 142 ಹಜ್ ಯಾತ್ರಾರ್ಥಿಗಳಿಗೆ ಸುರಕ್ಷಾ ಲಸಿಕಾ ಅಭಿಯಾನ ನಡೆಸಲಾಯಿತು.

ಚಿತ್ರದುರ್ಗ: ನಗರದ ಎಂ.ಕೆ.ಪ್ಯಾಲೇಸ್ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿರ್ದೇಶನದಂತೆ ಜಿಲ್ಲೆಯ ಒಟ್ಟು 142 ಹಜ್ ಯಾತ್ರಾರ್ಥಿಗಳಿಗೆ ಸುರಕ್ಷಾ ಲಸಿಕಾ ಅಭಿಯಾನ ನಡೆಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯ ಒಟ್ಟು 142 ಯಾತ್ರಾರ್ಥಿಗಳಿಗೆ ಸುರಕ್ಷಾ ಲಸಿಕೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಇದರ ಉಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಜಾಗತಿಕ ತಾಪಮಾನ ಹೆಚ್ಚಾಗಿರುವುದರಿಂದ ಬಿಸಿಲಾಘಾತ ಘಟನೆಗಳು ಸಂಭವಿಸದಂತೆ ದೇಹವನ್ನು ನಿರ್ಜಲೀಕರಣವಾಗದಂತೆ ತಡೆಯುವುುದು ಅಗತ್ಯ. ಪದೇ ಪದೇ ನೀರು ಕುಡಿಯುವುದು, ನೆರಳಿನ ವಾತಾವರಣದಲ್ಲಿ ಇರುವುದು, ದ್ರವರೂಪ ಆಹಾರ ಸೇವನೆ ಮಾಡುವುದು, ಮಜ್ಜಿಗೆ, ಎಳನೀರು, ನಿಂಬೆ ಹಣ್ಣಿನ ಪಾನಕ ಸೇವಿಸುವುದು ಒಳ್ಳೆಯದು ಎಂದರು.

ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಮೆನಂಜೋ ಕಾಕಲ್ ಮೆನಂಜೈಟೀಸ್ ರೋಗ, ಇನ್ಫ್ಲೂಯಂಜಾ ಮತ್ತು ಓರಲ್ ಪೋಲಿಯೊ ಲಸಿಕೆ ಈ ದಿನ ಎಲ್ಲಾ ಯಾತ್ರಾರ್ಥಿಗಳಿಗೆ ನೀಡಲಾಗುತ್ತಿದೆ. ಇದರ ಜೊತೆ ಲಸಿಕಾ ದೃಢೀಕರಣ ಪತ್ರ ಎಲ್ಲರಿಗೂ ನೀಡಲಾಗುತ್ತಿದೆ. ನಿಮ್ಮ ಯಾತ್ರೆ ಪ್ರಯಾಣ ಸುಖಕರವಾಗಿರಲಿ. ಲಸಿಕಾ ದೃಢೀಕರಣ ಸುರಕ್ಷಿತವಾಗಿ ಇಟ್ಟುಕೊಳ್ಳಿ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್, ಗೋಪಾಲಕೃಷ್ಣ, ಡಾ.ರಾಹುಲ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಅರುಂಧತಿ, ಆಶಾ ಕಾರ್ಯಕರ್ತೆಯರು, ಕರ್ನಾಟಕ ರಾಜ್ಯ ಹಜ್ ಸಮಿತಿ ಸಿಬ್ಬಂದಿ ಜಿ.ಕರೀಮುಲ್ಲಾ, ಜಿಲ್ಲಾ ಲಸಿಕಾ ವ್ಯವಸ್ಥಾಪಕ ವಿರೇಶ್ ಸೇರಿದಂತೆ ಜಿಲ್ಲೆಯ ವಿವಿಧ ಮಸೀದಿಗಳ ಮುಖ್ಯಸ್ಥರು ಭಾಗವಹಿಸಿದ್ದರು.