ಹಿಂದೂ ಮಹಾಗಣಪತಿ ಸಮಿತಿಯಿಂದ 2ನೇ ವರ್ಷದ ಗಣೇಶೋತ್ಸವವನ್ನು ಸೆ.14 ರಿಂದ ಸೆ.24ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಮಿತಿಯ ಮುಖಂಡ ವೆಂಕಟೇಶನಾಯಕ ಬೈರಿಮಡ್ಡಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಹಿಂದೂ ಮಹಾಗಣಪತಿ ಸಮಿತಿಯಿಂದ 2ನೇ ವರ್ಷದ ಗಣೇಶೋತ್ಸವವನ್ನು ಸೆ.14 ರಿಂದ ಸೆ.24ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಮಿತಿಯ ಮುಖಂಡ ವೆಂಕಟೇಶನಾಯಕ ಬೈರಿಮಡ್ಡಿ ತಿಳಿಸಿದರು.

ನಗರದ ತಾಲೂಕು ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಗಾಂಧಿವೃತ್ತದಿಂದ ಕೆನರಾ ಬ್ಯಾಂಕ್ ವರೆಗೆ ಬೃಹತ್ ಮೆರವಣಿಗೆ ನಡೆಸಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗುವುದು. 11 ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 9ಕ್ಕೆ ಮಹಾಪೂಜೆ, ಮಧ್ಯಾಹ್ನ ಅನ್ನಪ್ರಸಾದ ಹಾಗೂ ಸಂಜೆ 6.30ಕ್ಕೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸೆ.15, 16, 17 ಹಾಗೂ 19 ರಂದು ರಸಮಂಜರಿ, ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವೀರಯೋಧರಗೆ ಗೌರವ ಸನ್ಮಾನ ಹಾಗೂ ಮಹಾದಾನಿಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಅಲ್ಲದೆ, ಝೀ ಕನ್ನಡ ಸರಿಗಮಪ ಖ್ಯಾತಿಯ ದ್ಯಾಮೇಶ ಕಾರಟಗಿ, ಮೋನಮ್ಮ ಸೋಮನಮರಡಿ ಅವರ ಗಾಯನ ವೈಭವ ಹಾಗೂ ರಾಚಯ್ಯಸ್ವಾಮಿ ಕಲಬುರಗಿ ಅವರಿಂದ ಹಾಸ್ಯ ಸಂಜೆ ಆಯೋಜಿಸಿದೆ.

ಸೆ.20ರಂದು ಬೆಳಿಗ್ಗೆ 7ಕ್ಕೆ ಲೋಕ ಕಲ್ಯಾಣಾರ್ಥ ಮಹಾಮೃತ್ಯುಂಜಯ ಹೋಮ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಸೆ.21ರಂದು ಹಾಸ್ಯ ಕಲಾವಿದರಾದ ಸಂಜು ಬಸ್ಸಯ್ಯ ಮತ್ತು ಪಲ್ಲವಿ ಬಳ್ಳಾರಿ ಅವರಿಂದ ಹಾಸ್ಯ ಸಂಜೆ ಹಾಗೂ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಸೆ.23 ರಂದು ಮಿಮಿಕ್ರಿ ಕಲಾವಿದ ಗೋಪಿ ಬೆಂಗಳೂರು, ಮಾಳು ನಿಪ್ಪನಾಳ, ಕಲಬುರಗಿಯ ಕವಿತಾ ಅವರ ಗಾಯನ ವೈಭವ ಮತ್ತು ಝೀ ಕನ್ನಡ ಡಿ.ಕೆ.ಡಿ ತಂಡದಿಂದ ನೃತ್ಯ ವೈಭವ ನಡೆಯಲಿದೆ.

ಸೆ.24 ರಂದು ಮಧ್ಯಾಹ್ನ ಕಾಂತಾರ ತಂಡ, ಗೊಂಬೆ ಕುಣಿತ ತಂಡ (ಗೋರಿಲ್ಲಾ, ಭಜರಂಗಿ) ನಾಸಿಕ್ ಡೋಲ್ ತಂಡ್ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಶೋಭಾಯಾತ್ರೆ ನಡೆಸಿ ಗಣೇಶ ವಿಸರ್ಜನೆ ಮಾಡಲಾಗುವುದು ಎಂದರು.

ಇದೇ ವೇಳೆ ಮಾತನಾಡಿದ ಸಮಿತಿಯ ಮುಖಂಡ ಶಿವಮೊನಯ್ಯ ನಾಯಕ ಗೋನಾಲ, ಗಣೇಶೋತ್ಸವದಲ್ಲಿ ಡಿಜೆ ಬಳಕೆಗೆ ಸರ್ಕಾರ ವಿಧಿಸಿರುವ ನಿರ್ಬಂಧವನ್ನು ಸಮಿತಿ ವಿರೋಧಿಸುತ್ತದೆ. ಸುರಪುರ ಶಾಂತಿಯುತ ಪ್ರದೇಶವಾಗಿದ್ದು, ಇಲ್ಲಿ ಸೂಕ್ತ ನಿಯಮ ಹಾಗೂ ಭದ್ರತಾ ಕ್ರಮಗಳೊಂದಿಗೆ ಡಿಜೆ ಬಳಕೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಸುರಪುರದಲ್ಲಿ ಎಲ್ಲ ಜನಾಂಗ ಹಾಗೂ ಧರ್ಮದವರು ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದು, ಯಾವುದೇ ಕೋಮು ಸಂಘರ್ಷಕ್ಕೆ ಆಸ್ಪದವಿಲ್ಲ. ಹಿಂದೂ ಮಹಾಗಣಪತಿ ಉತ್ಸವ ಸರ್ವ ಸಮಾಜವನ್ನು ಒಗ್ಗೂಡಿಸುವ ವೇದಿಕೆಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲಕ್ಷ್ಮೀಕಾಂತ ಬಿರಾದರ ದೇವರಗೋನಾಲ, ಭೀಮಣ್ಣ ಬೇವಿನಾಳ, ಜಗದೀಶ ಪಾಟೀಲ, ಗಂಗಾಧರ ನಾಯಕ ಅರಳಹಳ್ಳಿ, ಶರಣು ನಾಯಕ ದೀವಳಗುಡ್ಡ, ಬಸವರಾಜ ಕವಡಿಮಟ್ಟಿ, ದತ್ತು ಗುತ್ತೇದಾರ್, ಸಂಗನಗೌಡ ಕೋಳಿಹಾಳ, ವಿಜಯಕುಮಾರ ಚಿಟ್ಟಿ, ಸಂದೀಪ ಜೋಷಿ, ರಮೇಶ ಗೌಡ, ದೇವೇಂದ್ರಪ್ಪ ಅಜ್ಜಕೊಲ್ಲಿ, ರಾಜು ಟೇಲರ್, ಮಲ್ಲು ವಿಷ್ಣುಸೇನೆ, ದೇವು ಪತ್ತಾರ, ಚಂದ್ರು ಎಲಿಗಾರ, ಲೋಕೇಶ ಡೊಣ್ಣೆಗೇರಿ, ವಾಸುನಾಯಕ ಬೈರಿಮಡ್ಡಿ, ದೇವು ಕಬಡಗೇರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.