ಸುರಪುರ: ಸಿದ್ದಾಪುರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ !

| Published : Mar 11 2024, 01:15 AM IST

ಸಾರಾಂಶ

ಸಾರ್ವಜನಿಕರ ಸಹಕಾರದೊಂದಿಗೆ ಬೆಟ್ಟದಲ್ಲಿ ತಪಾಸಣೆ ಮಾಡಲಾಗಿದೆ. ದಾಳಿ ಮಾಡಿದ ಸ್ಥಳದಲ್ಲಿ ಬೋನು ಮತ್ತು ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ. ಬೋನಿನಲ್ಲಿ ಶ್ವಾನವನ್ನು ಹಾಕಿ ಚಿರತೆ ಸೆರೆಗೆ ಬಲಿ ಬೀಸಲಾಗಿದೆ.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ದೇವರಗೋನಾಲ ಸೀಮೆಯ ಸಿದ್ದಾಪುರ ಬೆಟ್ಟಗುಡ್ಡಗಳಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಹಳ ಜಾಗರೂಕತೆಯಿಂದ ಇರಬೇಕು ಎಂದು ತಾಲೂಕು ಆಡಳಿತ ಮತ್ತು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈಚೆಗೆ ಸಿದ್ದಾಪುರ ಬೆಟ್ಟದ ಭಾಗದಲ್ಲಿ ಸಂಸ್ಥಾನದ ರಾಜಾ ವಾಸುದೇವ ನಾಯಕ ಅವರ ತೋಟದ ಮನೆಯ ಸಮೀಪ ಮಧ್ಯರಾತ್ರಿಯಲ್ಲಿ ಚಿರತೆ ಕಂಡುಬಂದಿದೆ. ನಾಯಿಯೊಂದರ ಮೇಲೆ ಚಿರತೆ ದಾಳಿ ಮಾಡಿದೆ. ನಾಯಿ ಚೀರಾಟ ಕಂಡು ಹೊರಗೆ ಬಂದಾಗ ಚಿರತೆ ಇರುವುದು ಕಾಣಿಸಿದೆ. ಗಲಾಟೆ ಗದ್ದಲ ಮಾಡಿ ಓಡಿಸಲಾಯಿತು ಎಂದು ರಾಜಾ ವಾಸುದೇವ ನಾಯಕ ತಿಳಿಸಿದ್ದಾರೆ.

ಚಿರತೆ ಪ್ರತ್ಯಕ್ಷವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆಯಲಾಗಿದೆ. ಬೇಸಿಗೆ ಕಾಲವಾಗಿರುವುದರಿಂದ ಪ್ರಾಣಿಯ ಹೆಜ್ಜೆ ಗುರುತುಗಳು ದೊರೆತಿಲ್ಲ. ಮಣ್ಣಿನ ಮೇಲೆ ನಡೆದು ಹೋಗಿದ್ದು, ಗಾಳಿಗೆ ಅಳಿಸಿ ಹೋಗಿದೆ. ಮಾಚಗೂಂಡಾಳ ಬೆಟ್ಟದ ಸೀಮೆಯಲ್ಲಿ ಪ್ರಕೃತಿಫಾರ್ಮ್ ಹೌಸ್ ಹತ್ತಿರದಲ್ಲಿ ಕೊಳೆತ ಪ್ರಾಣಿಯ ಮಾಂಸ ಪತ್ತೆಯಾಗಿದೆ. ಯಾವ ಪ್ರಾಣಿಯೆಂಬುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಲಿದೆ ಎಂದು ವಲಯ ಅರಣ್ಯ ಅಧಿಕಾರಿ ಬುರಾನುದ್ದೀನ್ ಮುಜಾವರ್ ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿದ ಅಧಿಕಾರಿಗಳು, ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಬೆಟ್ಟದಲ್ಲಿ ತಪಾಸಣೆ ಮಾಡಲಾಗಿದೆ. ದಾಳಿ ಮಾಡಿದ ಸ್ಥಳದಲ್ಲಿ ಬೋನು ಮತ್ತು ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ. ಬೋನಿನಲ್ಲಿ ಶ್ವಾನವನ್ನು ಹಾಕಿ ಚಿರತೆ ಸೆರೆಗೆ ಬಲಿ ಬೀಸಲಾಗಿದೆ. 10 ಸಿಬ್ಬಂದಿಗಳಿರುವ ಎರಡು ತಂಡಗಳನ್ನು ರಚಿಸಲಾಗಿದ್ದು, ದಾಳಿ ಮಾಡಿದ ಸ್ಥಳದಲ್ಲಿ ಮೊಕ್ಕಾಂ ಹೂಡಲಾಗಿದೆ. ಬೆಳಗ್ಗೆ ಒಂದು ತಂಡ ಹಾಗೂ ರಾತ್ರಿ ಮತ್ತೊಂದು ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ತಾಲೂಕಿನ ಬೊಮ್ಮನಹಳ್ಳಿ, ಜಾಲಿಬೆಂಚಿ, ಮಾಲಗತ್ತಿ, ವಾರಿ ಸಿದ್ದಾಪುರ, ದೇವರಗೋನಾಲ, ಹೆಗ್ಗಣದೊಡ್ಡಿ, ಮಲ್ಲಿಭಾವಿ, ದೇವಿಕೇರಾ, ರತ್ತಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಿರತೆ ಬಂದಿರುವ ಬಗ್ಗೆ ಜನರು ಭಯಪಡದಂತೆ ಜಾಗೃತಿ ಮೂಡಿಸಲಾಗಿದೆ. ಮನೆಮನೆ ಬಾಗಿಲಿಗೆ ಬಿತ್ತಿಪತ್ರಗಳನ್ನು ವಿತರಿಸಲಾಗುತ್ತಿದೆ. ಶೀಘ್ರದಲ್ಲೇ ಚಿರತೆ ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿರತೆ ದಾಳಿ ಮಾಡಿದ ಸ್ಥಳಕ್ಕೆ ಡಿಎಫ್‌ಒ ಭೇಟಿ ನೀಡಿ ಪರಿಶೀಲಿಸಿ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಚಿರತೆಯ ಓಡಾಡಿರುವ ಕುರುಹು ದೊರೆತಿಲ್ಲ. ಮಾಂಸವೂ ಕೊಳೆತ ಸ್ಥಿತಿಯಲ್ಲಿ ಇದ್ದುದ್ದರಿಂದ ಯಾವ ಪ್ರಾಣಿ ತಿಂದಿದೆ ಎಂಬುದು ಗುರುತಿಸಲು ಕಷ್ಟಸಾಧ್ಯವಾಗಿದೆ. ಕ್ಯಾಮೆರಾ ಟ್ರ್ಯಾಪ್ ಮತ್ತು ಬೋನ್ ಅಳವಡಿಸಿದ್ದು, ಚಿರತೆ ಸೆರೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ.

ಬುರಾನುದ್ದೀನ್ ಮುಜಾವರ್, ಆರ್‌ಎಫ್.ಒ. ಸುರಪುರ.