ಸುರೇಶಗೌಡ ಹೇಳಿಕೆಗೆ ಮುಸ್ಲಿಂ ಸಮುದಾಯದಿಂದ ಖಂಡನೆ

| Published : Nov 11 2024, 11:45 PM IST / Updated: Nov 11 2024, 11:46 PM IST

ಸಾರಾಂಶ

ಶಾಸಕ ಬಿ. ಸುರೇಶ್ ಗೌಡ ಅವರು ಸಚಿವ ಜಮೀರ್ ಅಹಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯವಾಗಿದ್ದು, ಈ ವಾಕ್ ಪ್ರಹಾರವನ್ನು ಮುಸ್ಲಿಮರು ಮತ್ತು ಮುಸ್ಲಿಂ ಸಮುದಾಯದ ಸಂಘಟನೆಗಳು ಸಹಿಸುವುದಿಲ್ಲ ಎಂದು ಮುಖಂಡ ನಿಸಾರ್ ಅಹಮದ್ ಆರೀಫ್ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಶಾಸಕ ಬಿ. ಸುರೇಶ್ ಗೌಡ ಅವರು ಸಚಿವ ಜಮೀರ್ ಅಹಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯವಾಗಿದ್ದು, ಈ ವಾಕ್ ಪ್ರಹಾರವನ್ನು ಮುಸ್ಲಿಮರು ಮತ್ತು ಮುಸ್ಲಿಂ ಸಮುದಾಯದ ಸಂಘಟನೆಗಳು ಸಹಿಸುವುದಿಲ್ಲ ಎಂದು ಮುಖಂಡ ನಿಸಾರ್ ಅಹಮದ್ ಆರೀಫ್ ಹೇಳಿದರು.

ನಗರದಲ್ಲಿ ಈ ಕುರಿತು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬೋರ್ಡ್ ಆಸ್ತಿಗಳ ಸಂಬಂಧವಾಗಿ ಅಂದಿನ ಬಿಜೆಪಿ ಸರ್ಕಾರವೇ ಆಸ್ತಿ ರಕ್ಷಣೆ ಮಾಡಿಕೊಡುವುದಾಗಿ ಘೋಷಣೆ ಮಾಡಿತ್ತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಸ್ಲಿಮರಿಗೆ ವಕ್ಫ್ ಸಂಬಂಧಿಸಿದ ಆಸ್ತಿಗಳನ್ನ ರಕ್ಷಣೆ ಮಾಡಿಕೊಳ್ಳವಂತೆ ತಿಳಿಸಿದರು. ಆದರೆ ಇದೀಗ ವಕ್ಫ್ ಬೋರ್ಡ್ ಖಾತೆ ಸಚಿವ ಜಮೀರ್ ಅಹಮದ್ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಸರ್ಕಾರಿ ಆಸ್ತಿಗಳನ್ನು ಭೂಗಳ್ಳರು ಮತ್ತು ನುಂಗುಬಾಕರುಗಳಿಂದ ರಕ್ಷಣೆ ಮಾಡುವ ಸಲುವಾಗಿ ರಾಜ್ಯಾದ್ಯಂತ ಸಂಚರಿಸಿ ರಕ್ಷಣೆ ಮಾಡುವುದಾಗಿ ತಿಳಿಸಿದ ಬೆನ್ನಲ್ಲೇ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಪ್ರತಿಭಟನೆ ವೇಳೆ ಸಚಿವರ ವಿರುದ್ಧ ಬಳಸಿರುವ ಮಾತುಗಳು ಅಸಂಬದ್ಧವಾಗಿದ್ದು ಗ್ರಾಮಾಂತರ ಶಾಸಕರಿಗೆ ಆಸ್ತಿ ಬಗ್ಗೆ ಮತ್ತು ಹೋರಾಟಗಳ ಬಗ್ಗೆ ಮಾಹಿತಿ ಇಲ್ಲ ಎಂದರು.

ಸುಖ ಸುಮ್ಮನೆ ನಮ್ಮ ನಾಯಕರ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಾರೆ, ಅಧಿಕಾರದಲ್ಲಿದ್ದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಕೂಡಾ ವಕ್ಫ್ ಆಸ್ತಿ ಸಂರಕ್ಷಣೆ ಬಗ್ಗೆ ಧ್ವನಿ ಎತ್ತಿವೆ. ಆದರೆ ಇದರ ಮಾಹಿತಿ ಅರಿಯದ ಗ್ರಾಮಾಂತರ ಶಾಸಕರು ಮಾತನಾಡಿರುವುದು ಖಂಡನಿಯವೆಂದು ವಾಗ್ದಾಳಿ ನಡೆಸಿದರು.

ಶಿಸ್ತಿನ ಪಕ್ಷ ಬಿಜೆಪಿಯಿಂದ ಪಾಠ ಕಲಿತ ಶಾಸಕರು ಈ ರೀತಿ ವರ್ತಿಸಬಾರದಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಲ್ಲಾಭಕ್ಷ್‌, ಶ್ರೀರಾಮ ನಗರ ನಜೀಮ್ ಉಲ್ಲಾ, ಅಬೀಬಿಯಾ, ಮಹಮದ್ ಹುನಿಸ್, ಮರಳುದಿಣ್ಣೆ ಮಸಿದ್ ನ ರಹಮತ್, ಎಜಾಸ್ ಜಾಮೀಯಾ ಮಸಿದಿ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.