ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸುರೇಶ್‌ ಕೊಡುಗೆ ಶೂನ್ಯ

| Published : Feb 09 2024, 01:47 AM IST

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಡಿ.ಕೆ.ಸುರೇಶ್ ಕ್ಷೇತ್ರಕ್ಕೆ ನೀಡಿರುವ ಕೊಗುಡೆ ಶೂನ್ಯ. ಯಾವ ಹೊಸ ಯೋಜನೆಗಳನ್ನು ಈವರೆಗೂ ಕ್ಷೇತ್ರಕ್ಕೆ ತಂದಿಲ್ಲ ಎಂದು ಬಿಎಸ್ಪಿ ಪಕ್ಷದ ಸಂಭವನೀಯ ಅಭ್ಯರ್ಥಿ ಡಾ.ಚಿನ್ನಪ್ಪ ಚಿಕ್ಕ ಹಾಗಡೆ ವಾಗ್ದಾಳಿ ನಡೆಸಿದರು.

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಡಿ.ಕೆ.ಸುರೇಶ್ ಕ್ಷೇತ್ರಕ್ಕೆ ನೀಡಿರುವ ಕೊಗುಡೆ ಶೂನ್ಯ. ಯಾವ ಹೊಸ ಯೋಜನೆಗಳನ್ನು ಈವರೆಗೂ ಕ್ಷೇತ್ರಕ್ಕೆ ತಂದಿಲ್ಲ ಎಂದು ಬಿಎಸ್ಪಿ ಪಕ್ಷದ ಸಂಭವನೀಯ ಅಭ್ಯರ್ಥಿ ಡಾ.ಚಿನ್ನಪ್ಪ ಚಿಕ್ಕ ಹಾಗಡೆ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಸುರೇಶ್ ಅವರು ತಮ್ಮ ಆಸ್ತಿಯನ್ನು ರಕ್ಷಣೆ ಮಾಡಿಕೊಳ್ಳಲು ಸಂಸದರಾಗುತ್ತಿದ್ದಾರೆ. ಗುದ್ದಲಿಪೂಜೆಗಷ್ಟೇ ಸೀಮಿತವಾಗಿರುವ ಸುರೇಶ್ ಅವರು ಜಿಲ್ಲೆಗೆ ಹೊಸ ಕಾರ್ಖಾನೆ, ನೀರಾವರಿ ಯೋಜನೆ ತರವಲ್ಲಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಗ್ರಾಮ ಸಂಪರ್ಕ ಸಭೆ ಆಯೋಜಿಸುತ್ತಿದ್ದಾರೆ. ಕಳೆದ ಐದು ವರ್ಷದಲ್ಲಿ ಮಾಡದ ಕೆಲಸವನ್ನು ಇತ್ತೀಚಿಗೆ ಮಾಡುತ್ತಿದ್ದು, ಜನರ ಗಮನ ಸೆಳೆಯಲು ಗಿಮಿಕ್ ಮಾಡಲು ಪ್ರಾರಂಭಿಸಿದ್ದಾರೆ. ಹಾಗಾಗಿ ದೇಶ ವಿಭಜನೆ ಮಾಡುವ ಹೇಳಿಕೆ ನೀಡಿದರು.

ಸುರೇಶ್ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತಪ್ಪು ಮರೆ ಮಾಚುವ ಸಲುವಾಗಿ ಕಾಂಗ್ರೆಸ್‌ನವರು ದೆಹಲಿ ಚಲೋ ನಡೆಸಿದರು. ದೆಹಲಿ ರಾಜ್ಯ ಕಾಂಗ್ರೆಸಿಗರು ಒಂದು ದಿನ ಟ್ರಿಪ್ ಮತ್ತು ಪಿಕ್‌ನಿಕ್ ಮಾಡಿ ಬಂದಿದ್ದಾರೆ. ಪ್ರತಿಭಟನೆ ಹೆಸರಿಲ್ಲಿ ದೆಹಲಿಯಲ್ಲಿ ಭೂರಿ ಭೋಜನ ಸವಿದು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪರ್ಯಾಯವಾಗಿ ಬಿಎಸ್ಪಿ ಹೆಜ್ಜೆ ಹಾಕುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ಆದರೂ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾಥಾವತ್ತಾಗಿ ಜಾರಿಗೆ ತಂದಿಲ್ಲ. ಸಂವಿಧಾನ ಆಶಯ ಜಾರಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ಜನಾಂಗ ಸೇರಿದಂತೆ ಎಲ್ಲಾ ವರ್ಗದ ಜನತೆ ಕಲ್ಯಾಣಕ್ಕಾಗಿ ಬಿಎಸ್ಪಿ ಬೆಂಬಲಿಸುವಂತೆ ಚಿನ್ನಪ್ಪ ಮನವಿ ಮಾಡಿದರು.

ಬಿಎಸ್ಪಿಯ ಬೆಂಗಳೂರು ವಿಭಾಗದ ಉಸ್ತುವಾರಿ ನಾಗೇಶ್ ಮಾತನಾಡಿ, ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ಜೆಡಿಎಸ್ ಅವರದ್ದು ಕುಟುಂಬ ರಾಜಕಾರಣವಾಗಿದ್ದು, ಮಗನನ್ನು ಮುನ್ನೆಲೆಗೆ ತರುವ ಸಲುವಾಗಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಈ ಹಿಂದೆ ಬಿಎಸ್ಪಿ ಜತೆಗೂ ಕುಮಾರಸ್ವಾಮಿ ಕೈ ಜೋಡಿಸಿ ಚುನಾವಣೆಯಲ್ಲಿ ಶೇ.30ರಷ್ಟು ಹೆಚ್ಚು ಮತ ಪಡೆದುಕೊಂಡಿದ್ದರು. ಮೂರು ಪಕ್ಷದೊಂದಿಗೆ ಸೇರಿ ಅಧಿಕಾರ ಅನುಭವಿಸಿರುವ ಜೆಡಿಎಸ್ ನೈತಿಕತೆ ಕಳೆದುಕೊಂಡಿದೆ ಎಂದು ಟೀಕಿಸಿದರು.

ಸಂಸದ ಡಿ.ಕೆ.ಸುರೇಶ್ ರವರು ಕ್ಷೇತ್ರಕ್ಕೆ ಶಾಶ್ವತ ಯೋಜನೆಯನ್ನು ತಂದಿಲ್ಲ. ಮೇಕೆದಾಟು ಯೋಜನೆ ಜಾರಿಯಾಗಿದ್ದರೆ ಈ ಭಾಗದ ಜನತೆ ನೆಮ್ಮದಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿತ್ತು. ರೇಲ್ವೆ, ರೇಷ್ಮೆಗೆ ಸಂಬಂಧಿಸಿದಂತೆ ಯಾವ ವಿಚಾರವಾಗಿಯೂ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ದೂರಿದರು.

ನರೇಗಾ ಯೋಜನೆಯಲ್ಲಿ ತಮ್ಮ ಹಿಂಬಾಲಕರಿಗೆ ಕೆಲಸ ಕೊಟ್ಟು, ಬೋಗಸ್ ಕೆಲಸ ಮಾಡಿಸಲಾಗುತ್ತಿದೆ. ಮೂರು ಬಾರಿ ಸಂಸದರಾದರು ಬಗರ್ ಹುಕುಂ ಸಾಗುವಳಿ ಚೀಟಿ ನೀಡಿಲ್ಲ. ಮನೆ, ನಿವೇಶನ ಹಂಚಿಕೆ ಸೇರಿದಂತೆ ಯಾವುದನ್ನು ಮಾಡಿಲ್ಲ ಎಂದು ಹೇಳಿದರು.

ಜೆಡಿಎಸ್ ಅಧಿಕಾರಕ್ಕಾಗಿ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಜತೆ ಹೊಂದಾಣಿಕೆ ಮಾಡಿಕೊಂಡು ವಂಚಿಸಿದೆ. ಇದೀಗ, ಕೋಮು ಸೌಹಾರ್ದ ಕದಡುವ ಬಿಜೆಪಿ ಜೊತೆ ಕೈ ಜೋಡಿಸಿದೆ. ಸಂವಿಧಾನದ ಆಶಯ ಉಳಿಸಲು ಬಿಎಸ್ಪಿ ಅಧಿಕಾರಕ್ಕೆ ಬರಬೇಕಿದೆ ಎಂದು ನಾಗೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕೃಷ್ಣಪ್ಪ, ಮುನಿಯಲ್ಲಪ್ಪ, ಅಬ್ದುಲ್ ರಹೀಂ, ಗೌರಿಶಂಕರ್, ಬೈರಪ್ಪ, ಮುರುಗೇಶ್, ಕಿರಣ್, ಕೃಷ್ಣಮೂರ್ತಿ, ಕುಮಾರ್ ಆಚಾರ್, ಪುಟ್ಟಸ್ವಾಮಿ, ಪರಮೇಶ್ ಇತರರಿದ್ದರು.8ಕೆಆರ್ ಎಂಎನ್ 6.ಜೆಪಿಜಿ

ಬಿಎಸ್ಪಿ ಪಕ್ಷದ ಸಂಭವನೀಯ ಅಭ್ಯರ್ಥಿ ಡಾ.ಚಿನ್ನಪ್ಪ ಚಿಕ್ಕ ಹಾಗಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.