ಗಂಭೀರವಾಗಿ ಗಾಯಗೊಂಡಿದ್ದ ವಿಷದ ಹಾವಿಗೆ ಶಸ್ತ್ರಚಿಕಿತ್ಸೆ, 40 ಹೊಲಿಗೆ

| Published : Jan 24 2024, 02:00 AM IST

ಗಂಭೀರವಾಗಿ ಗಾಯಗೊಂಡಿದ್ದ ವಿಷದ ಹಾವಿಗೆ ಶಸ್ತ್ರಚಿಕಿತ್ಸೆ, 40 ಹೊಲಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿಯ ಮಲ್ಟಿಸ್ಪೆಷಾಲಿಟಿ ವೆಟರ್ನರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹಾವಿಗೆ 40 ಹೊಲಿಗೆ ಹಾಕಲಾಗಿದೆ. ಸದ್ಯ ಹಾವು ಸುರಕ್ಷಿತವಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಮೀನಿನಲ್ಲಿ ಅಗೆಯುತ್ತಿರುವ ವೇಳೆ ಜೆಸಿಬಿ ಯಂತ್ರಕ್ಕೆ ಸಿಲುಕಿ ಗಾಯಗೊಂಡಿದ್ದ ನಾಗರ ಹಾವಿಗೆ ಶಸ್ತ್ರಚಿಕಿತ್ಸೆ ಮಾಡಿ ರಕ್ಷಣೆ ಮಾಡಲಾಗಿದೆ.

ಬೆಳಗಾವಿ ತಾಲೂಕಿನ ಕೇದ್ನೂರು ಗ್ರಾಮದಲ್ಲಿ ಜೆಸಿಬಿ ಯಂತ್ರದ ಮೂಲಕ ಜಮೀನಿನಲ್ಲಿ ಅಗೆಯುತ್ತಿರುವಾಗ ದೊಡ್ಡಗಾತ್ರದ ನಾಗರ ಹಾವು ಸಿಲುಕಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಹಾವನ್ನು ರಕ್ಷಿಸಲು ಸ್ಥಳೀಯ ನಿವಾಸಿಯೊಬ್ಬರು ಉರಗ ತಜ್ಞ ಕೇತನ್ ಜಯವಂತ ರಾಜೈಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಕೇತನ ತಕ್ಷಣ ಹಾವು ರಕ್ಷಣೆ ಮಾಡಿ ವೈದ್ಯರ ಬಳಿಗೆ ತೆಗೆದುಕೊಂಡು ಹೋಗಿದ್ದಾರೆ. ಬೆಳಗಾವಿಯ ಮಲ್ಟಿ ಸ್ಪೆಷಾಲಿಟಿ ವೆಟರ್ನರಿ ಆಸ್ಪತ್ರೆಯ ತಜ್ಞ ಪಶುವೈದ್ಯರು ನಾಗರ ಹಾವನ್ನು ರಕ್ಷಿಸಲು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹಾವಿನ ದೇಹದ ಎರಡು ಕಡೆಗಳಲ್ಲಿ ಹರಿದು ಹೋಗಿದ್ದನ್ನು ಕಂಡ ವೈದ್ಯರು 40ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಿದ್ದಾರೆ.

ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಕೆದ್ನೂರು ಗ್ರಾಮದ ಉರಗ ರಕ್ಷಕ ಕೇತನ್ ಜಯವಂತ ರಾಜೈ ಎಂಬುವರು ಕಳೆದ 16 ವರ್ಷಗಳಿಂದ ಹಾವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಬಿ.ಸಣ್ಣಕ್ಕಿ, ಪಶುವೈದ್ಯಾಧಿಕಾರಿ ಡಾ.ಮಹಾದೇವ ಮುಲ್ಲಾಟಿ ಅವರನ್ನೊಳಗೊಂಡ ಪಶುವೈದ್ಯರ ತಂಡವು ಈ ವಿಷಪೂರಿತ ಹಾವಿಗೆ ಅರಿವಳಿಕೆ ನೀಡಿ ಒಳಾಂಗಗಳ ಹೊರತೆಗೆಯುವಿಕೆ, ಸೀಳುವಿಕೆ ಮತ್ತು ಪುನರ್‌ ನಿರ್ಮಾಣ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಹಾವು ಸಾಮಾನ್ಯವಾಗಿ ಉಸಿರಾಡಲು ಸಾಧ್ಯವಾಗದ ಕಾರಣ ಆಮ್ಲಜನಕದ ಪೂರೈಕೆಯನ್ನೂ ಮಾಡಲಾಗಿತ್ತು. ವೈದ್ಯರು ಹಾವಿಗೆ ಐದು ದಿನಗಳ ಚಿಕಿತ್ಸೆ ನೀಡುತ್ತಿದ್ದು, ಹಾವು ತೀವ್ರ ನಿಗಾದಲ್ಲಿದೆ.

ಈ ವೇಳೆ ಮಾತನಾಡಿದ ಉರಗ ರಕ್ಷಕ ಕೇತನ್, ನಾನು ಹಾವನ್ನು ರಕ್ಷಿಸಲು ಹೋದಾಗ ಗಂಭೀರವಾಗಿ ಗಾಯಗೊಂಡಿತ್ತು. ಸದ್ಯ ಹಾವು ಆಘಾತಕ್ಕೊಳಗಾಗಿದ್ದು, ಉಸಿರಾಟ ಅಸಹಜವಾಗಿದೆ. ಅದಕ್ಕೆ ನೀರು ಕುಡಿಸಿದ್ದೇನೆ. ಚಿಕಿತ್ಸೆ ಪೂರ್ಣಗೊಳಿಸಲು ಇನ್ನೂ ಮೂರು ದಿನ ಆಸ್ಪತ್ರೆಗೆ ಸಾಗಿಸುತ್ತೇನೆ ಎಂದರು.

ಮುಖ್ಯ ವೈದ್ಯಾಧಿಕಾರಿ ಡಾ.ಎಚ್.ಬಿ.ಸಣ್ಣಕ್ಕಿ ಮಾತನಾಡಿ, ಮೊದಲ ಬಾರಿಗೆ ವಿಷಪೂರಿತ ಹಾವಿಗೆ ಇಂತಹ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಗದ್ದೆಯಲ್ಲಿ ಮಣ್ಣು ಅಗೆಯುವಾಗ ಯಂತ್ರದ ಹಲ್ಲುಗಳು ತಗುಲಿ ಹಾವಿನ ಚರ್ಮ, ಮಾಂಸಖಂಡ, ಬೆನ್ನು ಮೂಳೆಗಳು ತುಂಡಾಗಿವೆ. ಹಾವಿನ ಒಳಾಂಗಗಳು, ಲೈಂಗಿಕ ಅಂಗಗಳು ಮತ್ತು ಜೀರ್ಣಾಂಗ ವ್ಯವಸ್ಥೆಯು ಹೊರಬಂದಿತ್ತು. ಸಾಮಾನ್ಯ ಅರಿವಳಿಕೆ ನೀಡಿದ ನಂತರ, ನಾವು ಗಾಯಗಳನ್ನು ತೊಳೆದು, ಪ್ರತಿಜೀವಕಗಳನ್ನು ಹಾಕಿದ್ದೇವೆ. ಅದರ ಅಂಗಗಳನ್ನು ಮರುಸ್ಥಾಪಿಸಿದ ನಂತರ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗಾಯವನ್ನು ಮುಚ್ಚಲು ಹಾವಿಗೆ 40ಕ್ಕೂ ಹೆಚ್ಚು ಹೊಲಿಗೆ ಹಾಕಿದ್ದೇವೆ ಎಂದರು.