ಅಂತರಂಗ ಶುದ್ಧಿಯಾಗದ ಹೊರತು ಶರಣರಾಗಲು ಸಾಧ್ಯವಿಲ್ಲ; ರವೀಶ್ ಕ್ಯಾತನಬೀಡು

| Published : May 03 2024, 01:00 AM IST

ಸಾರಾಂಶ

ಚಿಕ್ಕಮಗಳೂರು, ಮನುಷ್ಯನ ಒಳಗಿನ ಅನೇಕ ಮುಖವಾಡಗಳನ್ನು ಕಳಚಿ ಅಂತರಂಗ ಶುದ್ಧಿ ಮಾಡದ ಹೊರತು ಶರಣರಾಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ರವೀಶ್‌ ಕ್ಯಾತನಬೀಡು ಹೇಳಿದರು.

ಉಂಡಾಡಿಹಳ್ಳಿಯ ಜಯ ಬಸವಾನಂದ ತಪೋಭೂಮಿಯಲ್ಲಿ ಜಿಲ್ಲಾ ಕದಳಿ ವೇದಿಕೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮನುಷ್ಯನ ಒಳಗಿನ ಅನೇಕ ಮುಖವಾಡಗಳನ್ನು ಕಳಚಿ ಅಂತರಂಗ ಶುದ್ಧಿ ಮಾಡದ ಹೊರತು ಶರಣರಾಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ರವೀಶ್‌ ಕ್ಯಾತನಬೀಡು ಹೇಳಿದರು.

ಉಂಡಾಡಿಹಳ್ಳಿಯ ಜಯ ಬಸವಾನಂದ ತಪೋಭೂಮಿಯಲ್ಲಿ ಜಿಲ್ಲಾ ಕದಳಿ ವೇದಿಕೆ ಉದ್ಘಾಟನೆ ಹಾಗೂ ಕಾಯಕ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿರು, ವಚನಕಾರರು ಸತ್ಯಶುದ್ಧವಾದ ಬದುಕನ್ನು ಅರಸಿದವರು. ಅಂತರಂಗ-ಬಹಿರಂಗದ ಶುದ್ಧಿಗಾಗಿ ಇಡೀ ಜೀವಮಾನ ನಡೆದವರು. ಅವರು ಕೊಟ್ಟು ಹೋಗಿರುವ ವಿಚಾರಗಳನ್ನು ನಾವು ವೈಭವೀಕರಿಸದೇ ಅದರಂತೆ ನಡೆದುಕೊಳ್ಳುವುದೇ ನಿಜವಾದ ವಚನದ ಅರ್ಥ ಎಂದರು.

ಎಲ್ಲರೂ ಬರೀ ಮೆಚ್ಚುಗೆ ಮಾತುಗಳನ್ನಾಡುತ್ತಾರೆ. ಸತ್ಯದ ಹೆಜ್ಜೆಯನ್ನು ಯಾರೂ ಇಡುವುದಿಲ್ಲ. ಜಗತ್ತಿನ ನೋವಿನ ಗಾಯಕ್ಕೆ ವಚನದ ಸಿದ್ಧೌಷಧವೇ ಸರಿಯಾದ ದಾರಿ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಕದಳಿ ಮಹಿಳಾ ವೇದಿಕೆ ಸಂಚಾಲಕರಾದ ಸುಶೀಲ ಸೋಮಶೇಖರ್, ಮಹಿಳೆಯರು ಈ ಕಾಲಕ್ಕೆ ವಚನಗಳನ್ನು ಹೆಚ್ಚು ಅರ್ಥವನ್ನು ಮಾಡಿಕೊಂಡು ಅದರಂತೆ ಬದುಕಬೇಕು. ಜಗತ್ತಿನಲ್ಲಿ ಅಕ್ಕ ಮಹಾದೇವಿಯಂತಹ ಜ್ಞಾನ ವೈರಾಗ್ಯ ನಿಧಿ ನಮಗೆ ಪ್ರೇರಣೆಯಾಗಬೇಕು. ಬದುಕಿನಲ್ಲಿ ಕಷ್ಟ, ಸುಖಗಳು ಎಷ್ಟೇ ಬರಲಿ ಅವುಗಳನ್ನು ಎದುರಿಸಿ ಸಮಾಜದ ಏಳಿಗೆಗೆ ಮಹಿಳೆಯರು ಪಾಲುದಾರರಾಗಬೇಕು ಎಂದು ಹೇಳಿದರು.

ಶ್ರೀ ಜಯಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕಾಯಕವೇ ಕೈಲಾಸ ಅದನ್ನು ನಾವು ಮಾಡದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ. ಮನುಷ್ಯನ ಒಳ, ಹೊರಗಿನ ಶುದ್ಧೀಕರಣ ಅಗತ್ಯ. ಕಾಯಕ ದಿನಾಚರಣೆ ದಿನದಂದು ಕದಳಿ ವೇದಿಕೆ ಉದ್ಘಾಟನೆಯಾಗುತ್ತಿರುವುದು ಸಂತೋಷದ ವಿಷಯ. ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರವನ್ನು ನಿರಂತರವಾಗಿ ಜನಪರಗೊಳಿಸಿ ಎಂದು ತಿಳಿಸಿದರು.

ಕದಳಿ ವೇದಿಕೆ ಜಿಲ್ಲಾಧ್ಯಕ್ಷರಾಗಿ ವಿದ್ಯಾಧರೆ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದ ಪ್ರಸ್ತಾವವನ್ನು ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಮಂಜುನಾಥಸ್ವಾಮಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಯ ಚನ್ನೇಗೌಡ, ಬಾಣೂರು ಚನ್ನಪ್ಪ, ಗಂಗಾಧರ್ ಶಿವಪುರ, ಜಯಣ್ಣ ಉಪಸ್ಥಿತರಿದ್ದರು. 2 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಉಂಡಾಡಿಹಳ್ಳಿಯ ಜಯ ಬಸವಾನಂದ ತಪೋಭೂಮಿಯಲ್ಲಿ ಜಿಲ್ಲಾ ಕದಳಿ ವೇದಿಕೆ ಉದ್ಘಾಟನೆ ಹಾಗೂ ಕಾಯಕ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶ್ರೀ ಜಯ ಬಸವಾನಂದ ಸ್ವಾಮೀಜಿ, ರವೀಶ್‌ ಕ್ಯಾತನಬೀಡು, ವಿದ್ಯಾಧರೆ ಇದ್ದರು.