ಸೋರುತಿಹುದು ಬೆನಹಾಳ ಸರ್ಕಾರಿ ಶಾಲೆ!

| Published : May 26 2024, 01:30 AM IST

ಸಾರಾಂಶ

ಕಳೆದ ವರ್ಷ ಶಾಲಾ ಆರಂಭಕ್ಕೂ ಮುನ್ನ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಎಲ್ಲ ಸರ್ಕಾರಿ ಶಾಲೆಗಳ ಬಗ್ಗೆ ಕನ್ನಡಪ್ರಭ ಸಮಗ್ರ ವರದಿ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿಗಳು ಎಲ್ಲ ಶಿಕ್ಷಣಾಧಿಕಾರಿಗಳ ಸಭೆ ಕರೆದು ಕಟ್ಟಡ ಮರು ನಿರ್ಮಾಣ ಮಾಡುವಂತೆ ಆದೇಶಿಸಿದ್ದರು.

ಸಂಜೀವಕುಮಾರ ಹಿರೇಮಠ ಹೊಳೆಆಲೂರ

ಸಮೀಪದ ಬೆನಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 85 ವರ್ಷದ ಹಳೆಯ 6 ಕಟ್ಟಡಗಳು ಶಿಥಿಲಗೊಂಡಿದ್ದು, ಈ ಮಳೆಗಾಲದಲ್ಲಿ ತುಸುವೇ ಮಳೆ ಸುರಿದರೂ ಸೋರುತ್ತಿವೆ. ಜೀವ ಭಯದಲ್ಲಿಯೇ ಮಕ್ಕಳು ಪಾಠ ಪ್ರವಚನ ಕೇಳುವಂತಾಗಿದೆ.

ಶಾಲಾ ಕೊಠಡಿಗಳ ಮೇಲೆ ಕೆಂಪು ಹಂಚು ಹೊಂದಿದ್ದು, ಹಳೆ ಕಟ್ಟಡದ ಗೋಡೆಗಳು ಎಲ್ಲೆಂದರಲ್ಲಿ ಬಿರುಕು ಬಿಟ್ಟಿವೆ. ಮಳೆ ಬಂದಾಗ ಸೋರುವ ಕೊಠಡಿಗಳು, ಮಳೆ ನೀರು ಹೊಕ್ಕು ಮಕ್ಕಳು, ಶಿಕ್ಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ದೊಡ್ಡ ಮಟ್ಟದ ಮಳೆಯಾದಾಗ ಮಗು ನೀರು ಪಾಲಾಗುತ್ತಿರುವ ಸಂದರ್ಭದಲ್ಲಿ ಜೀವದ ಹಂಗು ತೊರೆದು ಬದುಕಿಸಿದ ಘಟನೆ ನಡೆದಿದ್ದು, ಮತ್ತೆ ಅಂತಹ ಸ್ಥಿತಿ ಬರಬಹುದು ಎಂಬ ಆತಂಕ ಇಲ್ಲಿಯ ಜನರನ್ನು ಕಾಡುತ್ತಿದೆ.

ಈ ಬಗ್ಗೆ ಸಾಕಷ್ಟು ಬಾರಿ ರೋಣ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸದ ಅಧಿಕಾರಿಗಳು ನೋಡಿಯೂ ನೋಡದಂತೆ ಕಣ್ಮುಚ್ಚಿ ಕುಳಿತ್ತಿದ್ದಾರೆ. 6 ಕೊಠಡಿಗಳ ಬಹುತೇಕ ಕಡೆ ಬಿರುಕು ಕಾಣಿಸಿಕೊಂಡ ಬಗ್ಗೆ ಎಸ್.ಡಿ.ಎಂ.ಸಿಯಿಂದ ಮುಖ್ಯೋಪಾಧ್ಯಾಯರು, ಗ್ರಾಮದ ಹಿರಿಯರು ಫೋಟೋ ಸಮೇತ ಶಿಕ್ಷಣ ಇಲಾಖೆಯ ಗಮನಕ್ಕೆ ತಂದರೂ ಗಮನ ಹರಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಡಿಸಿ ಆದೇಶಕ್ಕೂ ಕಿಮ್ಮತ್ತಿಲ್ಲ: ಕಳೆದ ವರ್ಷ ಶಾಲಾ ಆರಂಭಕ್ಕೂ ಮುನ್ನ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಎಲ್ಲ ಸರ್ಕಾರಿ ಶಾಲೆಗಳ ಬಗ್ಗೆ ಕನ್ನಡಪ್ರಭ ಸಮಗ್ರ ವರದಿ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿಗಳು ಎಲ್ಲ ಶಿಕ್ಷಣಾಧಿಕಾರಿಗಳ ಸಭೆ ಕರೆದು ಕಟ್ಟಡ ಮರು ನಿರ್ಮಾಣ ಮಾಡುವಂತೆ ಆದೇಶಿಸಿದ್ದರು.

ಅದರಂತೆ ಶಾಲಾ ವರದಿ ಸಹ ಪರಿಶೀಲನೆ ಮಾಡಿದ್ದರು. ಆದರೂ ಈವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ. ಇನ್ನೂ ನಾಲ್ಕು ದಿನದಲ್ಲಿ ಮತ್ತೆ ಶಾಲೆಗಳು ಪ್ರಾರಂಭವಾಗುತ್ತಿವೆ, ಮಳೆಗಾಲವು ಪ್ರಾರಂಭವಾಗಿದೆ, ಸೋರುತ್ತಿರುವ ಹಳೆಯ ಕಟ್ಟಡಗಳಲ್ಲಿಯೇ ಮಕ್ಕಳು ಪಾಠ, ಪ್ರವಚನ ಕಲಿಯಬೇಕಾದಂತಹ ಸ್ಥಿತಿ ಈ ವರ್ಷವೂ ಮುಂದುವರೆದಿದೆ ಎನ್ನುತ್ತಾರೆ ಸ್ಥಳೀಯರು.

ನಾವು ಎಸ್ಡಿಎಂಸಿ ಸದಸ್ಯರು ಸೇರಿ ಫೋಟೋ ಸಹಿತ ವರದಿಯನ್ನು ಇಲಾಖೆ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನೀಡಿದ್ದೇವೆ, ಆದರೂ ಇನ್ನೂ ದುರಸ್ತಿ ಆಗಿಲ್ಲ. ಪಾಲಕರು ಶಾಲೆಗೆ ಮಕ್ಕಳನ್ನು ಕಳಿಸಲು ಭಯ ಪಡುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯ ಸಿ.ಎನ್. ಜೋಗಿ ತಿಳಿಸಿದ್ದಾರೆ.10, 15 ವರ್ಷಗಳಿಂದ ಕಟ್ಟಡಗಳು ದುರಸ್ತಿಯಲ್ಲಿವೆ. ಅಲ್ಪಸ್ವಲ್ಪ ದುರಸ್ತಿ ಮಾಡಿದ್ದರು. 3,4 ವರ್ಷಗಳಿಂದ ಕಟ್ಟಡಗಳು ಸಂಪೂರ್ಣ ಶಿಥಿಲವಾಗಿವೆ. ನಾವು ಸರ್ವ ಸದಸ್ಯರು ಸಹಿತ ಶಿಕ್ಷಣ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದೇವೆ. ಶೀಘ್ರ ಶಿಕ್ಷಣ ಇಲಾಖೆ ಕಟ್ಟಡಗಳನ್ನು ದುರಸ್ತಿಗೊಳಿಸಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಬೇಕು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜು ತಳವಾರ ಹೇಳಿದರು.