1.22 ಲಕ್ಷ ಜನರಿಂದ ಸಮೀಕ್ಷೆ ತಿರಸ್ಕಾರ!

| Published : Nov 05 2025, 02:30 AM IST

ಸಾರಾಂಶ

ಗಣತಿದಾರರು ಮಾಹಿತಿ ನೀಡುವಂತೆ ಜನರ ಮೇಲೆ ಒತ್ತಡ ಹೇರಬಾರದು ಮತ್ತು ಸಮೀಕ್ಷೆಯು ಸ್ವಯಂ ಪ್ರೇರಿತವಾಗಿರಬೇಕು ಎಂದು ನ್ಯಾಯಾಲಯ ಸಹ ಹೇಳಿತ್ತು. ಈ ಹಿನ್ನೆಲೆಯಲ್ಲಿ ಗಣತಿದಾರರು ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಿದವರ ಮಾಹಿತಿ ಮಾತ್ರ ದಾಖಲಿಸಿದ್ದು, ತಿರಸ್ಕರಿಸಿದವರಿಂದ ತಿರಸ್ಕಾರದ ಪತ್ರದಲ್ಲಿ ಸಹಿ ಪಡೆದಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ:

ರಾಜ್ಯ ಹಿಂದುಳಿದ ಆಯೋಗವು ನಡೆಸಿದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಧಾರವಾಡ ಜಿಲ್ಲೆಯಲ್ಲಿ ಪೂರ್ಣವಾಗಿದ್ದು, ಶೇ.92.02ರಷ್ಟು ಜನರು ಗಣತಿದಾರರಿಗೆ ತಮ್ಮ ಮಾಹಿತಿ ಹಂಚಿಕೊಂಡಿದ್ದರೆ, ಶೇ.7.8ರಷ್ಟು ಜನರು ಸಮೀಕ್ಷೆಯನ್ನು ತಿರಸ್ಕಾರ ಮಾಡಿರುವುದಾಗಿ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ವಿದ್ಯುತ್‌ ಮೀಟರ್‌ಗಳ ಅನ್ವಯ ಜಿಲ್ಲೆಯಲ್ಲಿ 5.46 ಲಕ್ಷ ಕುಟುಂಬಗಳ 20.53 ಲಕ್ಷ ಜನರಿಂದ ಮಾಹಿತಿ ಸಂಗ್ರಹಣೆಯ ಗುರಿ ಹೊಂದಲಾಗಿತ್ತು. ಈ ಪೈಕಿ ಸುಮಾರು 4.5 ಲಕ್ಷ ಕುಟುಂಬಗಳ 18.89 ಲಕ್ಷ ಜನರ ಮಾಹಿತಿಯನ್ನು ಗಣತಿದಾರರು ಯಶಸ್ವಿಯಾಗಿ ಸಂಗ್ರಹಿಸಿದ್ದಾರೆ. ಗಣತಿದಾರರಲ್ಲಿ ಮಾಹಿತಿ ಹಂಚಿಕೊಳ್ಳದ 1.64 ಲಕ್ಷ ಜನರ ಪೈಕಿ 15,222 ನಿವಾಸಿಗಳು ಹೊರ ಜಿಲ್ಲೆ ಅಥವಾ ಹೊರ ರಾಜ್ಯ, ದೇಶದಲ್ಲಿದ್ದಾರೆ. ಅಂದಾಜು 26 ಸಾವಿರ ಜನರು ಆನ್‌ಲೈನ್‌ ಮೂಲಕ ನೋಂದಾಯಿಸಿಕೊಂಡಿದ್ದು ಸುಮಾರು 1.22 ಲಕ್ಷ ಜನರು ಸಮೀಕ್ಷೆಯನ್ನು ನೇರವಾಗಿ ತಿರಸ್ಕಾರ ಮಾಡಿದ್ದಾರೆ.

ಸ್ವಯಂ ಪ್ರೇರಿತ:

ಗಣತಿದಾರರು ಮಾಹಿತಿ ನೀಡುವಂತೆ ಜನರ ಮೇಲೆ ಒತ್ತಡ ಹೇರಬಾರದು ಮತ್ತು ಸಮೀಕ್ಷೆಯು ಸ್ವಯಂ ಪ್ರೇರಿತವಾಗಿರಬೇಕು ಎಂದು ನ್ಯಾಯಾಲಯ ಸಹ ಹೇಳಿತ್ತು. ಈ ಹಿನ್ನೆಲೆಯಲ್ಲಿ ಗಣತಿದಾರರು ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಿದವರ ಮಾಹಿತಿ ಮಾತ್ರ ದಾಖಲಿಸಿದ್ದು, ತಿರಸ್ಕರಿಸಿದವರಿಂದ ತಿರಸ್ಕಾರದ ಪತ್ರದಲ್ಲಿ ಸಹಿ ಪಡೆದಿದ್ದಾರೆ. ಕೆಲವರು ತಿರಸ್ಕಾರ ಪತ್ರಕ್ಕೂ ಸಹಿ ಹಾಕದೇ ಗಣತಿದಾರರೊಂದಿಗೆ ಒರಟಾಗಿ ವರ್ತಿಸಿರುವ ಉದಾಹರಣೆಗಳೂ ಇವೆ.

ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿ ನಡೆದ ಈ ಸಮೀಕ್ಷೆಯು ಪ್ರಾರಂಭದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ವೈಯಕ್ತಿಕ ವಿಚಾರ, ಬ್ಯಾಂಕ್ ಮಾಹಿತಿ, ಜಾತಿ ಸಮಸ್ಯೆಗಳ ಕಾರಣದಿಂದ ವಿರೋಧ ಪಕ್ಷಗಳು ಸಾಕ್ಷಷ್ಟು ಆಕ್ಷೇಪಣೆ ವ್ಯಕ್ತಪಡಿಸಿದವು. ಇದು ಸಾಮಾನ್ಯವಾಗಿ ಜನರಲ್ಲಿ ಗೊಂದಲ ಮತ್ತು ಹಿಂಜರಿಕೆಗೂ ಕಾರಣವಾಯಿತು. ಹಿಂದುಳಿದ ಸಮುದಾಯಗಳ ಕೆಲವರು ಗಣತಿದಾರರು ಮಾಹಿತಿ ಪಡೆಯುವ ಮೊದಲು ಜಾತಿ ಪ್ರಮಾಣಪತ್ರ ಕೊಡಿಸುತ್ತೀರಾ? ಎಂಬೆಲ್ಲಾ ವಿಚಿತ್ರ ಪ್ರಶ್ನೆಗಳನ್ನು ಸಹ ಕೇಳಿದ್ದುಂಟು.

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿದಂತೆ ಆಡಳಿತ ವರ್ಗ ಗಣತಿದಾರರು ಹಾಗೂ ಜನರ ಮನವೊಲಿಸಿ ಸಮೀಕ್ಷೆ ಕಾರ್ಯ ಶುರು ಮಾಡಿಸಿದರು. ಆದರೆ, ತಾಂತ್ರಿಕ ಅಡಚಣೆಗಳು ಶುರುವಾದವು. ನೆಟ್‌ವರ್ಕ್ ಸಮಸ್ಯೆ, ಆಗಾಗ್ಗೆ ಸಾಫ್ಟ್‌ವೇರ್ ದೋಷ, ಅಪ್ಲಿಕೇಶನ್ ನವೀಕರಣಗಳಲ್ಲಿನ ವಿಳಂಬ ಮತ್ತು ''''''''ವಿಶಿಷ್ಟ ಮನೆಯ ಐಡಿಗಳು ಕಾಣೆ'''''''' ಮತ್ತು ಸಮೀಕ್ಷೆಯ ಕಾಲಂಗಳು ತೆರೆಯದಿರುವುದು ಅನೇಕ ಗಣತಿದಾರರನ್ನು ಕಂಗಾಲು ಮಾಡಿದವು. ತರಬೇತಿ ಪಡೆದ ಸಿಬ್ಬಂದಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸಮೀಕ್ಷೆ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಪರದಾಡಬೇಕಾಯಿತು. ಈ ಎಲ್ಲ ಹಿನ್ನಡೆಗಳ ಮಧ್ಯೆಯೂ ಅ. 5ರ ವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಜಿಲ್ಲೆಯು ಶೇ.80ರಷ್ಟು ಸಾಧನೆ ಮಾಡಿತ್ತು.

ರಜೆಯಲ್ಲೂ ಗಣತಿ:

ಒಟ್ಟು 4,880 ಗಣತಿದಾರರು ಮತ್ತು 244 ಮೇಲ್ವಿಚಾರಕರು ದಸರಾ-ದೀಪಾವಳಿ ರಜೆಯಲ್ಲೂ ಕಾರ್ಯ ಮಾಡಿದ್ದು ಶ್ಲಾಘನೀಯ. ಅದಕ್ಕಿಂತ ಹೆಚ್ಚಾಗಿ ಕೆಲವೆಡೆ ಜನರಿಂದ ವಿಚಿತ್ರ ಪ್ರಶ್ನೆಗಳು, ಕಿರಿಕಿರಿ ಮಧ್ಯೆಯೂ ಗಣತಿದಾರರು ತಮ್ಮ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರ ವಿಶೇಷ ಪ್ರಯತ್ನದ ಫಲವಾಗಿ ಜಿಲ್ಲೆಯ ಸಮೀಕ್ಷೆಯನ್ನು ಮುಕ್ತಾಯಗೊಳಿಸಲಾಗಿದೆ. ಸುಮಾರು 1.22 ಲಕ್ಷ ಜನರು ಮಾಹಿತಿ ನೀಡಲು ನಿರಾಕರಿಸಿದ್ದು ಶೇ.92.2ರಷ್ಟು ಸಾಧನೆಯಾಗಿದೆ. ವೈಯಕ್ತಿಕವಾಗಿ ವಿವರಗಳನ್ನು ನೀಡಲು ಸಾಧ್ಯವಾಗದ ಅಥವಾ ಇಷ್ಟವಿಲ್ಲದವರಿಗೆ ಆನ್‌ಲೈನ್ ಸ್ವಯಂ ಘೋಷಣೆ ಲಿಂಕ್ ಮೂಲಕವೂ ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ, ಕೆಲವರು ಸಂಪೂರ್ಣವಾಗಿ ಸಮೀಕ್ಷೆಯನ್ನೇ ತಿರಸ್ಕರಿಸಿದ್ದಾರೆ. ಹಲವು ನಿವಾಸಿಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಭಾನುಮತಿ ಎಚ್, ಪತ್ರಿಕೆಗೆ ಮಾಹಿತಿ ನೀಡಿದರು.