ಸಾರಾಂಶ
ಯೋಗಾಸನಗಳಲ್ಲಿ ಸೂರ್ಯನಮಸ್ಕಾರಕ್ಕೆ ಮೊದಲ ಪ್ರಾಶಸ್ತ್ಯವಿದ್ದು, ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ವಿವಿಧ ಸ್ನಾಯುಗಳು ಹಿಗ್ಗುತ್ತವೆ. ನರಗಳ ದೌರ್ಬಲ್ಯ ಇದ್ದವರಿಗೆ ಶಕ್ತಿ ನೀಡುತ್ತದೆ.
ಮುಂಡರಗಿ: ಯೋಗಾಸನಗಳಲ್ಲಿ ಸೂರ್ಯನಮಸ್ಕಾರಕ್ಕೆ ಮೊದಲ ಪ್ರಾಶಸ್ತ್ಯವಿದ್ದು, ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ವಿವಿಧ ಸ್ನಾಯುಗಳು ಹಿಗ್ಗುತ್ತವೆ. ನರಗಳ ದೌರ್ಬಲ್ಯ ಇದ್ದವರಿಗೆ ಶಕ್ತಿ ನೀಡುತ್ತದೆ. ಹಾಗೆಯೇ ದೇಹವನ್ನು ಶುದ್ಧೀಕರಿಸಲು ಸೂರ್ಯ ನಮಸ್ಕಾರ ಸಹಾಯ ಮಾಡುತ್ತದೆ ಎಂಬುದು ಸಾಬೀತಾಗಿದೆ ಎಂದು ಸ್ಥಳೀಯ ಅನ್ಮೊಲ್ ಯೋಗ ಕೇಂದ್ರದ ನಿರ್ದೇಶಕಿ ಡಾ. ಮಂಗಳಾ ಚಂದ್ರಕಾಂತ ಇಟಗಿ ಹೇಳಿದರು.
ಅವರು ಶುಕ್ರವಾರ ಮುಂಡರಗಿ ಅನ್ಮೋಲ್ ಯೋಗ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರ ರಥಸಪ್ತಮಿ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಚಳಿಗಾಲದಲ್ಲಿ ಒಣಗಿದ ತರಗೆಲೆಯಂತೆ ಆದ ಶರೀರ ರಥ ಸಪ್ತಮಿಯ ಬಳಿಕ ಸೂರ್ಯನ ಶಾಖದಿಂದ ಹೊಸ ಚೈತನ್ಯ ಪಡೆಯುತ್ತದೆ. ಈ ಕಾರಣದಿಂದ ಈ ದಿನ ಸೂರ್ಯನಿಗೆ ಮೈಯೊಡ್ಡಿ 108 ಸೂರ್ಯ ನಮಸ್ಕಾರ ಮಾಡಲಾಗುತ್ತಿದೆ.ಹಾಗಾಗಿ ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದು ಆರೋಗ್ಯಕರ ದೇಹಕ್ಕೆ ಅಗತ್ಯ. ಸಕಲ ಜೀವಿಗಳಿಗೂ ಸೂರ್ಯನ ಬೆಳಕು, ಶಾಖದ ಅಗತ್ಯವಿದೆ. ಇದೇ ಕಾರಣಕ್ಕೆ ಸೂರ್ಯನ ಪೂಜೆಗೆ ವಿಶೇಷ ಮಾನ್ಯತೆ ಇದೆ. ರಥಸಪ್ತಮಿಯ ದಿನ ಸೂರ್ಯನ ಆರಾಧನೆ ನಡೆಸಿದರೆ ಎಲ್ಲಾ ರೀತಿಯ ದೈಹಿಕ ಮತ್ತು ಮಾನಸಿಕ ರೋಗ ಮತ್ತು ನೋವುಗಳು ಗುಣವಾಗುತ್ತವೆ ಎಂಬ ನಂಬಿಕೆ ಭಾರತೀಯರಲ್ಲಿದೆ ಎಂದರು.
ಅನ್ಮೋಲ್ ಯೋಗ ಪರಿವಾರದ ಯೋಗ ಸಾಧಕ, ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿ, ಸತತ ಏಳು ವರ್ಷಗಳಿಂದ ನಿರಂತರವಾಗಿ ರಥಸಪ್ತಮಿ ಎಂದು ಸಾಮೂಹಿಕ 108 ಸೂರ್ಯ ನಮಸ್ಕಾರಗಳಲ್ಲಿ ಭಾಗಿಯಾಗಿತ್ತಾ ಬಂದಿರುವುದು ನನಗೆ ಸಂತೋಷ ತಂದಿದೆ ಎಂದರು. ಅಶೋಕ ಹುಬ್ಬಳ್ಳಿ ಮಾತನಾಡಿ, 108 ನಮಸ್ಕಾರ ಹಾಕಿದ ತಮ್ಮ ಅನುಭವವನ್ನು ಹಂಚಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಿ ಈ ವಿಶೇಷ ದಿನದ ಉಪಯೋಗ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಅನ್ಮೋಲ್ ಯೋಗ ಪರಿವಾರದ ಹಿರಿಯ ಯೋಗ ಸಾಧಕ ಕರಬಸಪ್ಪ ಹಂಚಿನಾಳ ಅತ್ಯಂತ ಯಶಸ್ವಿಯಾಗಿ 108 ಸೂರ್ಯ ನಮಸ್ಕಾರಗಳನ್ನು ಹಾಕುವ ಮೂಲಕ ಎಲ್ಲರಿಗೂ ಸ್ಪೂರ್ತಿಯಾದ ಹಿನ್ನೆಲೆಯಲ್ಲಿ ಪರಿವಾರದ ಪರವಾಗಿ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಶೋಕ ಹಿಮಾದ್ರಿ, ಎಂ.ಟಿ.ಮಾಳಪುರ, ಶಾಂತ ಮಾಳಪುರ, ಶಿವಕುಮಾರ ಭೂಮರಡ್ಡಿ, ರವಿಗೌಡ ಪಾಟೀಲ, ವಾಸಂತಿ ಯಾಳಗಿ, ಅಂಜಲಿ ಹೊಸಮನಿ, ಭಾಗ್ಯಜ್ಯೋತಿ ಹುಬ್ಬಳ್ಳಿ, ಸಹನಾ ಶಿದ್ಲಿಂಗ, ಲಕ್ಷ್ಮಿ ಉಪ್ಪಾರ, ಆನ್ಲೈನ್ ಮೂಲಕ ಪಾಲ್ಗೊಂಡ ಶಿವಕುಮಾರ ಕುಷ್ಟಗಿ, ಕಲ್ಪನಾ, ಜ್ಯೋತಿ ಪಾಟೀಲ, ಗಿರಿಜಾ ಇಟಗಿ ಹೀಗೆ ರಾಜ್ಯದ ವಿವಿಧ ಭಾಗಗಳಿಂದಲೂ ಸಹ ರಥಸಪ್ತಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.