ಸಾರಾಂಶ
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿಗೆ ಸಮೀಪದ ಕೇಮಾಟ್‌ನಲ್ಲಿ ಹುಲಿ ದಾಳಿಗೆ ಸಿಲುಕಿ ಗಾಯಗೊಂಡ ಹಸುವೊಂದರ ಪರಿಸ್ಥಿತಿ ಚಿಂತಾಜನಕವಾಗಿದೆ. ಜೊತೆಗೆ ನಾಲ್ಕು ಹಸುಗಳು ನಾಪತ್ತೆಯಾಗಿದ್ದು, ಈ ಪೈಕಿ ಎರಡರ ಕಳೇಬರ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.ಹೋದವಾಡ ಗ್ರಾಮದ ಕೇಮಾಟ್ ಕಾಳಪ್ಪ ಮಾಡು ಎಂಬಲ್ಲಿ ಯೂಸುಫ್ ಹಾಜಿ ಎಂಬವರು ಪಶು ಸಂಗೋಪನೆ ಮಾಡುತ್ತಿದ್ದು ಮೇಯಲು ಬಿಟ್ಟ ಹಸು ಒಂದು ತೀವ್ರ ಗಾಯಗಳೊಂದಿಗೆ ಸೋಮವಾರ ಹಿಂದಿರುಗಿತ್ತು. ಹಸುವಿನ ದೇಹದಲ್ಲಿ ಮೂರು ನಾಲ್ಕು ಕಡೆಗಳಲ್ಲಿ ಹುಲಿ ಪಂಜಗಳಿಂದ ತೀವ್ರ ಗಾಯ ಮಾಡಿರುವ ಗುರುತು ಕಂಡುಬಂದಿದ್ದು ಹಾಲು ಕರೆಯುವ ಹಸು ತೀವ್ರ ಅಸ್ವಸ್ಥಗೊಂಡಿದೆ.
ಇದರೊಂದಿಗೆ ಕಳೆದ ಒಂದು ವಾರದಲ್ಲಿ ಈ ಭಾಗದಲ್ಲಿ ನಾಲ್ಕು ಹಸುಗಳು ನಾಪತ್ತೆಯಾಗಿದ್ದು, ಹುಡುಕಲು ತೆರಳಿದ ಯೂಸುಫ್ ಅವರಿಗೆ ಪ್ರಾಣಿಯ ಹೆಜ್ಜೆ ಗುರುತು ಕಾವೇರಿ ನದಿ ದಡದಲ್ಲಿ ಕಂಡಿದ್ದು ಹುಲಿಯ ಪಾದದ ಚಿಹ್ನೆ ಹೋಲುತ್ತಿದೆ. ಇದರೊಂದಿಗೆ ಅಲ್ಲಿ ಒಂದು ಹಸುವಿನ ಕಳೇಬರ ಕೂಡಾ ಕಂಡುಬಂದಿದೆ ಎಂದು ಯೂಸುಫ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಮಂಗಳವಾರ ಬಂದು ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸಿದ್ದಲ್ಲದೆ ಪಶು ಇಲಾಖೆ ಸಿಬ್ಬಂದಿ ಹಸುವಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಕರುವಿನ ಕಳೇಬರ: ಬುಧವಾರ ಬೆಳಗ್ಗೆ ಕೇಮಾಟ್ ಗ್ರಾಮದ ನಿವಾಸಿ ಅರುಣ್ ಕುಮಾರ್ ಅವರಿಗೆ ಸೇರಿದ ಅಡಕೆ ತೋಟದಲ್ಲಿ ಯೂಸುಫ್ ಹಾಜಿ ಅವರಿಗೆ ಸೇರಿದ ಇನ್ನೊಂದು ಕರುವಿನ ಕಳೇಬರ ಪತ್ತೆಯಾಗಿದೆ. ಹುಲಿ ಕರುವನ್ನು ಕೊಂದು ಅರ್ಧ ಭಾಗವನ್ನಷ್ಟೇ ತಿಂದು, ಇನ್ನರ್ಧ ಬಿಟ್ಟು ಹೋಗಿರುವುದಾಗಿ ಶಂಕಿಸಲಾಗಿದೆ. ಇಲ್ಲಿಗೆ ಸಮೀಪದಲ್ಲಿ ದೇವರ ಕಾಡಿದ್ದು ಅರಣ್ಯದೆಡೆಯಿಂದ ಹುಲಿ ನಾಡಿನ ಕಡೆಗೆ ಬಂದಿರಬಹುದು ಎಂದು ಶಂಕಿಸಲಾಗಿದೆ.ಜಾನುವಾರುಗಳನ್ನು ಮೇಯಲು ಬಿಟ್ಟಾಗ ಹುಲಿ ಅಥವಾ ಚಿರತೆ ಜಾನುವಾರಗಳ ಮೇಲೆ ದಾಳಿ ನಡೆಸಿ ತಿನ್ನುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
---ಅರಣ್ಯ ಇಲಾಖೆಯವರು ಕಾಟಚಾರಕ್ಕೆ ಎಂಬಂತೆ ಪರಿಶೀಲನೆ ಮಾಡಿ ತೆರಳಿದ್ದಾರೆ. ನಮ್ಮ ಮನೆ ರಸ್ತೆಯ ಆರಂಭದಲ್ಲಿಯೇ ಇದೆ. ಇಲ್ಲೇ ಸಮೀಪದಲ್ಲಿ ಹುಲಿ ಜಾನುವಾರುಗಳನ್ನು ತಿಂದಿರುವುದರಿಂದಾಗಿ ಮನೆಯಿಂದ ಹೊರಬರಲು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಕೂಡಲೇ ಅರಣ್ಯ ಇಲಾಖೆ ಹಾಗು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.
-ಕಿರಣ್ ಕುಮಾರ್ ಗ್ರಾಮಸ್ಥ.