ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಅವರು ಸಾಗುವ ಕನಕಪುರ ರಸ್ತೆ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣಕ್ಕೆ ಹೊರ ತಿರುವು ಸಿಕ್ಕಿದ್ದು, ಆತಂಕ ಸೃಷ್ಟಿಸಲು ಶಂಕಿತರು ನಡೆಸಿರುವ ಕೃತ್ಯ ಇದಾಗಿದೆ ಎಂಬ ಶಂಕೆ ಮೂಡಿದೆ.

ಸ್ಥಳದಲ್ಲಿ ಬರೀ ಜಿಲೆಟಿನ್‌ ಕಡ್ಡಿಗಳು ಮಾತ್ರ ಪತ್ತೆಯಾಗಿಲ್ಲ, ಬದಲಿಗೆ ಜಿಲೆಟಿನ್‌ ಕಡ್ಡಿಯ ಜತೆಗೆ ಕಾಟನ್‌ ಬಾಕ್ಸ್‌ನಲ್ಲಿ ಎಲೆಕ್ಟ್ರಿಕ್‌ ವಸ್ತುಗಳು, ಆರ್‌ಟಿಸಿ ಬ್ಯಾಟರಿಗಳು, ಸೆನ್ಸಾರ್‌, ಡಿಸ್‌ಪ್ಲೆ, ನ್ಯಾವಿಗೇಟರ್‌, ಕಂಟ್ರೋಲರ್‌, ಗಂಧದಕಡ್ಡಿ, ಬೆಂಕಿ ಕಡ್ಡಿ ಮತ್ತು ಕರ್ಪೂರ ಪತ್ತೆಯಾಗಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿದ್ದಾಗ ಉದ್ದೇಶಪೂರ್ವಕವಾಗಿಯೇ ಶಂಕಿತರು ಆತಂಕ ಸೃಷ್ಟಿಸಲು ಈ ಕೃತ್ಯ ಎಸಗಲು ಮುಂದಾಗಿದ್ದರು ಎಂಬುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ.

ಎನ್‌ಐಎಯಿಂದಲೂ ತನಿಖೆ: ಕಾಟನ್‌ ಬಾಕ್ಸ್‌ನಲ್ಲಿ ಜಿಲೆಟಿನ್‌ ಕಡ್ಡಿಯ ಜತೆಗೆ ಎಲೆಕ್ಟ್ರಾನಿಕ್‌ ವಸ್ತುಗಳು ಪತ್ತೆಯಾಗಿರುವುದರಿಂದಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಎಲ್ಲ ಅಂಶಗಳನ್ನು ಗಮನಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಗೆ ಇಳಿದಿದ್ದು, ಜಿಲೆಟಿನ್‌ ಕಡ್ಡಿಗಳು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯ ಪೊಲೀಸರಿಂದ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ ಶಂಕಿತರ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ. ಜಿಲೆಟಿನ್‌ ಕಡ್ಡಿ ದೊರೆತಿರುವ ಸ್ಥಳದ ಸುತ್ತ ಮುತ್ತ ಸಿಸಿ ಕ್ಯಾಮೆರಾಗಳು ಇಲ್ಲ. ಆದರೆ ಸಮೀಪದಲ್ಲಿರುವ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಿದ್ದಾರೆ.

ಆರಂಭದಲ್ಲಿ ಕಲ್ಲು ಕ್ವಾರಿ ಕಾರ್ಮಿಕರು ಈ ಜಿಲೆಟಿನ್‌ ಕಡ್ಡಿಗಳನ್ನು ಬೀಳಿಸಿಕೊಂಡು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಇದೀಗ ಜಿಲೆಟಿನ್‌ ಕಡ್ಡಿಗಳ ಜತೆ ಎಲೆಕ್ಟ್ರಾನಿಕ್‌ ವಸ್ತುಗಳು ಪತ್ತೆಯಾಗಿರುವುದು ಪ್ರಧಾನಿ ಆಗಮನದ ವೇಳೆ ಆತಂಕ ಸೃಷ್ಟಿಸಲು ಶಂಕಿತರು ನಡೆಸಿರುವ ಕೃತ್ಯವಿದು ಎನ್ನಲಾಗುತ್ತಿದೆ. ಸಿಕ್ಕಿರುವ ಜಿಲೆಟಿನ್ ಕಡ್ಡಿ 3 ವರ್ಷದ ಹಿಂದೆ ತಯಾರಾಗಿದೆ ಎನ್ನಲಾಗುತ್ತಿದೆ. ಗಡಿಯಾರಕ್ಕೆ ಬಳಸುವ ಶೆಲ್‌ ಮತ್ತು ವೈಯರ್‌ಗಳನ್ನು ಬಾಕ್ಸ್‌ನಲ್ಲಿ ಇರಿಸಲಾಗಿತ್ತು.


ವಿಶೇಷ ತಂಡದಿಂದಲೂ ಮುಂದುವರಿದ ಶೋಧ: ಪ್ರಕರಣದ ತನಿಖೆಗಾಗಿ ರಚನೆಯಾಗಿರುವ 6 ವಿಶೇಷ ತಂಡಗಳು ಶಂಕಿತರಿಗಾಗಿ ವಿವಿಧ ಆಯಾಮದಲ್ಲಿ ತೀವ್ರ ಶೋಧ ನಡೆಸಿವೆ. ಪತ್ತೆಯಾಗಿರುವ ಜಿಲೆಟಿನ್ ಕಡ್ಡಿಗಳು ತಮಿಳುನಾಡು ಭಾಗದ್ದು, ಎಂಬ ಮಾಹಿತಿ ಲಭ್ಯವಾಗಿರುವುದರಿಂದ ಒಂದು ತಂಡ ತಮಿಳುನಾಡಿಗೆ ತೆರೆಳಿ ಮಾಹಿತಿ ಕಲೆ ಹಾಕುತ್ತಿದೆ.