ಎಇಇ ಪ್ರಕಾಶ್ ಅಮಾನತುಗೊಳಿಸಿ: ವೆಂಕಟೇಶ್ ಆಗ್ರಹ

| Published : Sep 26 2025, 01:00 AM IST

ಎಇಇ ಪ್ರಕಾಶ್ ಅಮಾನತುಗೊಳಿಸಿ: ವೆಂಕಟೇಶ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟ ಉಂಟುಮಾಡಿರುವ ಬೆಸ್ಕಾಂನ ಬಿಡದಿ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಕಾಶ್ ಅವರನ್ನು ಅಮಾನತುಗೊಳಿಸುವಂತೆ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಆಗ್ರಹಿಸಿದರು.

ರಾಮನಗರ: ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟ ಉಂಟುಮಾಡಿರುವ ಬೆಸ್ಕಾಂನ ಬಿಡದಿ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಕಾಶ್ ಅವರನ್ನು ಅಮಾನತುಗೊಳಿಸುವಂತೆ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕಾಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಇಂಧನ ಸಚಿವ ಕೆ.ಜೆ.ಜಾರ್ಜ್, ಡಿ.ಕೆ.ಸುರೇಶ್, ಸ್ಥಳೀಯ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಶಿಫಾರಸು ಮಾಡಿದ್ದರೂ ಕೂಡ ಇಲಾಖಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

10 ವರ್ಷಗಳಿಗಿಂತಲೂ ಹೆಚ್ಚು ಕಾಲ ಒಂದೇ ಜಾಗದಲ್ಲಿದ್ದುಕೊಂಡು ನಿಯಮಬಾಹಿರವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಪ್ರಕಾಶ್, ರೈತರು, ಗ್ರಾಹಕರು ಹಾಗೂ ಗುತ್ತಿಗೆದಾರರಿಗೆ ಅನ್ಯಾಯ ಎಸಗಿದ್ದಾರೆ. ಇಲಾಖಾ ನಿಯಮಗಳನ್ನು ಗಾಳಿಗೆ ತೂರಿ ಹಲವಾರು ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಇದರಿಂದ ರೈತರಿಗೆ, ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಹಕರು ಹಾಗೂ ಇಲಾಖೆಯ ನಡುವೆ ಕೊಂಡಿಯಂತೆ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೂ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ರೈತರಿಗೆ, ಗ್ರಾಹಕರಿಗೆ ಆದ ಅನ್ಯಾಯವನ್ನು ಪ್ರಶ್ನಿಸಿದ ಗುತ್ತಿಗೆದಾರರ ವಿರುದ್ಧ ಸ್ಥಳೀಯ ಗೂಂಡಾಗಳನ್ನು ಛೂಬಿಟ್ಟು ಧಮಕಿ ಹಾಕಿಸುವ ಕೆಲಸವನ್ನೂ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ರಾಜಿ ಪಂಚಾಯಿತಿ ವೇಳೆ ತಪ್ಪೊಪ್ಪಿಗೆ ಬರೆದುಕೊಟ್ಟು ಪ್ರಕರಣವನ್ನು ಮುಗಿಸಿದ ನಂತರ ಮತ್ತದೇ ಕೆಲಸ ಮಾಡುತ್ತಿದ್ದಾರೆ ಎಂದರು.

ಯಾವುದೇ ಸರ್ಕಾರಿ ಅಧಿಕಾರಿ 2 ವರ್ಷದ ನಂತರ ಬೇರೊಂದು ಊರಿಗೆ ವರ್ಗಾವಣೆ ಆಗಬೇಕು. ಆದರೆ, ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡು, ಕೆಲ ಅಧಿಕಾರಿಗಳಿಗೆ ಆಮಿಷವನ್ನು ಒಡ್ಡುವ ಮೂಲಕ ಹತ್ತಾರು ವರ್ಷದಿಂದ ಬಿಡದಿಯಲ್ಲೇ ಬೀಡುಬಿಟ್ಟಿದ್ದಾರೆ. ಎಷ್ಟೇ ದೂರುಗಳು ಬಂದರೂ ಕನಿಷ್ಠ ಪಕ್ಷ ವರ್ಗಾವಣೆಯನ್ನೂ ಮಾಡದ ಇಲಾಖೆಯ ಉನ್ನತ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದರು.

ಇತ್ತೀಚೆಗೆ ಮೃತಪಟ್ಟ ಹೊರಗುತ್ತಿಗೆ ನೌಕರ ಸೂರ್ಯ ಕುಮಾರ್ ಸಾವಿಗೂ ಈತನೇ ನೇರ ಹೊಣೆಗಾರ. ರಜೆ ಮೇಲಿದ್ದ ನೌಕರನನ್ನು ಧಮಕಿ ಹಾಕಿ ಕರೆಯಿಸಿಕೊಂಡು ಕಂಬ ಹತ್ತಿಸಿದ್ದ ವೇಳೆ ಸಂಭವಿಸಿದ್ದ ಅಪಘಾತದಲ್ಲಿ ನೌಕರ ಗಾಯಗೊಂಡಿದ್ದನು. ಚಿಕಿತ್ಸೆ ಫಲಕಾರಿಯಾಗದೆ ಒಂದೂವರೆ ವರ್ಷದ ನಂತರ ಸಾವಿಗೀಡಾಗಿದ್ದಾನೆ. ಆದರೆ, ಸಂತ್ರಸ್ತ ಕುಟುಂಬಕ್ಕೆ ಯಾವುದೇ ನೆರವು ನೀಡದೆ ಉಡಾಫೆ ಉತ್ತರ ನೀಡಿದ ಹಿನ್ನೆಲೆಯಲ್ಲಿ ನಾವು ಶವವನ್ನು ರಾಮನಗರದ ಕಚೇರಿ ಎದುರು ಇಟ್ಟು, ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದರು.

ಹತ್ತಾರು ವರ್ಷಗಳಿಂದ ಒಂದೇ ಜಾಗದಲ್ಲಿ ಪಳಗಿರುವ ಪ್ರಕಾಶ್ ಕಚೇರಿಯಲ್ಲಿ ತಮ್ಮದೇ ಗುಂಪು ಕಟ್ಟಿಕೊಂಡಿದ್ದಾರೆ. ತಮಗಾಗದ ಸಹೋದ್ಯೋಗಿಗಳ ವಿರುದ್ಧ ಇಲ್ಲಸಲ್ಲದ ದೂರು ನೀಡಿ ಅವರಿಗೆ ಕಿರುಕುಳ ನೀಡುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಬಿಡದಿ ಕಚೇರಿಗೆ ವರ್ಗಾವಣೆ ಪಡೆಯಲು ನೌಕರರು ಹೆದರುತ್ತಿದ್ದಾರೆ ಎಂದರು.

ಪ್ರಕಾಶ್ ನಡೆಸಿರುವ ಅವ್ಯವಹಾರವನ್ನು ಸಾಕ್ಷಿ ಸಮೇತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಅಧಿಕಾರಿಗಳು ಈತನ ವಿರುದ್ಧ ಸಮಗ್ರ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಇವನ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಕಚೇರಿ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತ್ ಭೀಮಸೇನೆಯ ರಾಜ್ಯಾಧ್ಯಕ್ಷ ದಿನೇಶ್, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಬಿ.ಗೋಪಾಲ್, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಕೆ.ಗೋಪಾಲ್, ಪುಟ್ಟರಾಜು, ಸಂಜೀವಯ್ಯ, ಶ್ರೀಧರ್, ಸಂತೋಷ್, ಸಲೀಂ, ಶ್ರೀನಿವಾಸ್, ರಂಗಸ್ವಾಮಿ, ರಮೇಶ್, ಪಾರ್ಥಸಾರಥಿ, ಶಿವರಾಜು, ನಾಗಯ್ಯ, ವಿಜಯಕುಮಾರ್, ಚಿರಂಜೀವಿ, ಕೃಷ್ಣಮೂರ್ತಿ ಇತರರಿದ್ದರು.

24ಕೆಆರ್ ಎಂಎನ್ 9.ಜೆಪಿಜಿ

ರಾಮನಗರದಲ್ಲಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.