ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಪಟ್ಟಣದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳ ಲೋಪದಿಂದಾಗಿ ಅತಿವೃಷ್ಟಿಗೆ ಹಾಳಾದ ಅಡಿಕೆ ತೋಟಗಳ ೨೨೭೮ ರೈತರು ಬೆಳೆಹಾನಿ ಪರಿಹಾರದಿಂದ ವಂಚಿತರಾಗಿದ್ದು, ಈ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಿ, ರೈತರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿ ಹಾಗೂ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕೂಡಲೆ ಅಮಾನತು ಮಾಡಬೇಕು. ಆಗಿರುವ ಲೋಪವನ್ನು ಸರಿಪಡಿಸಿ ರೈತರಿಗೆ ಪರಿಹಾರ ಒದಗಿಸಬೇಕು. ರೈತನಿಗೆ ಸಂಕಟ ಬಂದಾಗ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರು ಬೇಡಿಕೆ ಈಡೇರಿಸದೇ ಚಲ್ಲಾಟ ಆಡುತ್ತಿದ್ದಾರೆ. ಯಾವುದೇ ಬ್ಯಾಂಕುಗಳು ರೈತರ ಸಾಲ ವಸೂಲಿಗೆ ನೋಟಿಸ ನೀಡುವಂತಿಲ್ಲ. ರೈತನಿಗೆ ಹಿಂಸಿಸುವಂತಿಲ್ಲ. ನಾವು ಭಯೋತ್ಪಾದಕರಲ್ಲ. ದೇಶ ಬಿಟ್ಟು ಓಡಿ ಹೋಗಲ್ಲ. ನೀವು ರೈತರಿಗೆ ತೊಂದರೆ ಕೊಟ್ಟರೆ ನಮ್ಮ ಸಂಘಟನೆ ಸುಮ್ಮನಿರಲ್ಲ. ಎಲ್ಲ ಸಂದರ್ಭದಲ್ಲಿ ನಮ್ಮ ಹಕ್ಕು ನಾವು ಪಡೆದೇ ಪಡೆಯುತ್ತೇವೆ. ತಾಲೂಕು ತಹಸೀಲ್ದಾರರು ಎಲ್ಲ ಇಲಾಖೆ ಅಧಿಕಾರಿಗಳಿಗೆ, ಬ್ಯಾಂಕುಗಳ ಅಧಿಕಾರಿಗಳಿಗೆ ಸರಿಯಾದ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.ಬೆಳೆವಿಮೆ ಪರಿಹಾರವಿಲ್ಲ, ರೈತರ ಸಂಕಷ್ಟ ಕೇಳುವವರಿಲ್ಲ. ಕೃಷಿ ಪಂಪ್‌ಸೆಟ್‌ಗೆ ನಿತ್ಯ ೭ ಗಂಟೆ ವಿದ್ಯುತ್ ನೀಡಬೇಕು. ೨೦೧೫-೧೬ನೇ ಸಾಲಿನ ಬೆಳೆವಿಮೆ ವ್ಯತ್ಯಾಸದ ಬಾಕಿ ನೀಡಬೇಕು. ಕೂಡಲೇ ಬೆಳೆವಿಮೆ ಪರಿಹಾರ ಒದಗಿಸಬೇಕು. ೨೦೧೮-೧೯ರಲ್ಲಿ ಅತಿವೃಷ್ಟಿಗೆ ಬೆಳೆ ಕಳದುಕೊಂಡ ೬೦೦೦ ಸಾವಿರ ರೈತರಿಗೆ ಪರಿಹಾರ ದೊರೆತಿಲ್ಲ. ನೆಪಗಳನ್ನು ಹೇಳುವುದನ್ನು ಖಂಡಿಸುತ್ತೇವೆ. ಕೃಷಿ ಇಲಾಖೆಯಲ್ಲಿ ರೈತರಿಗೆ ಸಹಾಯಧನದಲ್ಲಿ ಕೃಷಿ ಉಪಕರಣಗಳು ಸಿಗುತ್ತಿಲ್ಲ. ಮಳೆಯಿಂದ ಕೃಷಿ ಭೂಮಿಯಲ್ಲಿ ಬಿದ್ದ ಕೊರಕಲು ಆದ ೧೭೫ ಪ್ರಕರಣಗಳ ಪರಿಹಾರ ರೈತರಿಗೆ ದೊರೆತಿಲ್ಲ. ಕಳೆದ ವರ್ಷ ಅತಿವೃಷ್ಟಿಗೆ ಹಾಳಾದ ಅಡಿಕೆ ಬೆಳೆ ಪರಿಹಾರ ಈ ವರೆಗೂ ಅನುಮೋದನೆಯಾಗದೆ, ೨೨೭೮ ಪ್ರಕರಣಗಳು ತಹಸೀಲ್ದಾರ ಲಾಗಿನ್‌ನಲ್ಲಿಯೇ ಉಳಿದಿವೆ. ಬಾಳಂಬೀಡ ಏತ ನೀರಾವರಿ ಯೋಜನೆ, ಪಶುಸಂಗೋಪನಾ ಇಲಾಖೆಯ ಸಮಸ್ಯೆಗಳು, ವಿದ್ಯುತ್ ಗ್ರಿಡ್ ಸಮಸ್ಯೆ ಮುಂತಾದವು ಅನ್ನದಾತರನ್ನು ಕಂಗೆಡಿಸಿವೆ. ಕೂಡಲೇ ಈ ಎಲ್ಲಕ್ಕೂ ಪರಿಹಾರ ದೊರಕಿಸಿ ಕೊಡಬೇಕು ಎಂಬ ಬೇಡಿಕೆಯುಳ್ಳ ಮನವಿಯನ್ನು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದರು.
ಪ್ರತಿಭಟನೆ ಮೆರವಣಿಗೆ:ಪಟ್ಟಣದ ನಿರೀಕ್ಷಣಾ ಮಂದಿರದಿಂದ ತಹಸೀಲ್ದಾರ ಕಚೇರಿಯವರೆಗೆ ಬೈಕ್ ರ‍್ಯಾಲಿ ಹಾಗೂ ಕಾಲ್ನಡಿಗೆ ಮೂಲಕ ಪ್ರತಿಭಟನಾ ನಡೆಸಿದ ರೈತರು, ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ಭುವನೇಶ ಶಿಡ್ಲಾಪೂರ, ರುದ್ರಪ್ಪ ಹಣ್ಣಿ, ಅಡಿವೆಪ್ಪ ಕುರಿಯವರ, ಮಲ್ಲೇಶಪ್ಪ ಪರಪ್ಪನವರ, ಸೋಮಣ್ಣ ಜಡೆಗೊಂಡರ, ಶ್ರೀಕಾಂತ ದುಂಡಣ್ಣನವರ, ಶಂಕರಗೌಡ ಪಾಟೀಲ, ಶಂಭುಗೌಡ ಪಾಟೀಲ, ಅಜ್ಜನಗೌಡ ಕರೆಗೌಡ್ರ, ಷಣ್ಮುಖ ಅಂದಲಗಿ, ರುದ್ರಗೌಡ ಪಾಟೀಲ, ಅನಿಲ ಚಿಕ್ಕಾಂಸಿ, ರಾಮಣ್ಣ ಕೋಟಿ, ನಾಗರಾಜ ಹಿತ್ಲೇರ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.