ಸಾರಾಂಶ
ಚಾಮರಾಜನಗರ: ಆದಿಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿ ಪರಭಾರೆ ಮಾಡಿ ಅಲಿ ನೇಷನ್ ಮಾಡಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕೈಗೊಂಡು ಅವರನ್ನು ಸೇವೆಯಿಂದ ಅಮಾನತ್ತುಪಡಿಸಬೇಕು ಎಂದು ಆದಿಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿಸಂರಕ್ಷಣಾ ಸಮಿತಿ ಕಾರ್ಯದರ್ಶಿ ಅಯ್ಯನಪುರ ಶಿವಕುಮಾರ್ ಒತ್ತಾಯಿಸಿದರು. ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮನವಿಯಂತೆ ಸಂಘದ ಆಸ್ತಿ ಪರಭಾರೆ ಮಾಡಿಕೊಂಡು ಅಲಿ ನೇಷನ್ ಮಾಡಿಕೊಂಡಿದ್ದ ಚಾ.ಸಿ.ಗೋವಿಂದರಾಜು ಅವರ ಅಲಿನೇಶನ್ ರದ್ದು ಪಡಿಸಿರುವುದು ಸ್ವಾಗತಾರ್ಹ. ಆದರೆ ಕೂಡಲೇ ಆಸ್ತಿ ಪರಭಾರೆ ಮಾಡಿದ ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ಅಧಿಕಾರಿ, ತಹಸೀಲ್ದಾರ್, ಚೂಡಾಧಿಕಾರಿಗಳು, ನಗರಸಭಾ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕೈಗೊಂಡು ಅವರನ್ನು ಸೇವೆಯಿಂದ ಅಮಾನತ್ತು ಪಡಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ಸಭೆಯನ್ನು ದುರುಪಯೋಗ ಪಡಿಸಿಕೊಂಡು ಆದಿಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿಸಂರಕ್ಷಣಾ ಸಮಿತಿ ಹೇಳಿದಂತೆ ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿಚಾರದಲ್ಲಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿಗಳ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಮೂಲಕ ಪ್ರಕರಣ ದಾಖಲು ಮಾಡುತ್ತೀರಿ. ಉಪ್ಪಾರರು, ನಾಯಕರು, ಕುರುಬರು ವೀರಶೈವ ಸಮಾಜದವರಿಗೆ ಸರ್ಕಾರ ನೀಡಿರುವ ಆಸ್ತಿಯಲ್ಲಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅವರ ಮೇಲೆ ಯಾವುದೇ ಕ್ರಮಕೈಗೊಳ್ಳದೇ ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿಚಾರದಲ್ಲಿ ಪ್ರಕರಣ ದಾಖಲು ಮಾಡುತ್ತೀರಿ, ನಿಮ್ಮ ಮೇಲೆ ಎಸ್ಸಿ, ಎಸ್ಟಿ ಮೊಕದ್ದಮೆ ದಾಖಲು ಮಾಡುವುದಾಗಿ ಧಮಕಿ ಹಾಕಿರುವ ಸಿ.ಕೆ.ರವಿಕುಮಾರ್, ಸಿ.ಕೆ.ಮಂಜುನಾಥ ಇತರ ವಿರುದ್ದ ಎಫ್ಐಆರ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.ನಾಯಕರು, ವೀರಶೈವರು, ಉಪ್ಪಾರರು, ಕುರುಬರ ಸಮುದಾಯದವರು ಸಮಾಜದ ಅಭಿವೃದ್ಧಿ ಗಾಗಿ ಸರ್ಕಾರ ನೀಡಿರುವ ಆಸ್ತಿ ಅಂಗಡಿಗಳು, ಕಾಂಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ ಹೊರತು ಆದಿಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಅವರ ರೀತಿಯಲ್ಲಿ ಸಮುದಾಯದ ಆಸ್ತಿಯನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಅಲಿನೇಷನ್ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸುಳ್ಳು ಅಫಿಡವಿಟ್ ಸಲ್ಲಿಸಿರುವುದು ಕಂಡುಬಂದಿದ್ದು ಕಳೆದ ಜುಲೈ 4 ರಂದು ಅಲಿನೇಷನ್ ಅನ್ನು ರದ್ದುಪಡಿಸಿದ್ದಾರೆ. ಅಲ್ಲದೇ ತಾಲೂಕು ಆದಿಕರ್ನಾಟಕ ಅಭಿವೃದ್ಧ ಸಂಘದ ವತಿಯಿಂದ ಜೈ ಭೀಮ್ ಬಿಜಿನೆಸ್ ಸೌಹಾರ್ದ ಸಹಕಾರ ಸಂಘಕ್ಕೆ ಅಂಗಡಿ - ಮಳಿಗೆಯನ್ನು 29 ವರ್ಷ 11 ತಿಂಗಳು ಭೋಗ್ಯ ಕರಾರು ಮಾಡಿಕೊಟ್ಟಿದ್ದಾರೆ. ಬಾಡಿಗೆ ಕರಾರು 11 ತಿಂಗಳು ಇರುತ್ತದೆ. ಆದರೆ, 29 ವರ್ಷ 11 ತಿಂಗಳು ಕೊಟ್ಟಿರುವುದು ಸರಿಯಲ್ಲ. ಆದ್ದರಿಂದ ಭೋಗ್ಯ ಕರಾರನ್ನು ರದ್ದುಪಡಿಸಬೇಕು ಎಂದು ಅಯ್ಯನಪುರ ಶಿವಕುಮಾರ್ ಒತ್ತಾಯಿಸಿದರು.
ಎಸ್.ಮಹದೇವಯ್ಯ ಕ್ರಿಮಿನಲ್ ಪಿನ್: ಸಂಘದ ನಿರ್ದೇಶಕ ಮಹದೇವಯ್ಯ ಅವರೊಬ್ಬರೂ ಕ್ರಿಮಿನಲ್ ಪಿನ್ ಆಗಿದ್ದು, ದಿನನಿತ್ಯ ಅಧಿಕಾರಿಗಳು, ವಕೀಲರನ್ನು ಭೇಟಿ ಮಾಡುವುದರೊಂದಿಗೆ ಆದಿಕರ್ನಾಟಕ ಅಭಿವೃದ್ಧಿ ಸಂಘದಲ್ಲಿ ನಡೆದಿರುವ ಅಕ್ರಮಗಳನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ಆರ್.ಮಹದೇವು, ಮಾಜಿ ಸದಸ್ಯ ನಲ್ಲೂರು ಸೋಮೇಶ್ವರ್, ಮುಖಂಡರಾದ ಚನ್ನಂಜಯ್ಯ, ಗೋವಿಂದರಾಜು, ನಾಗಯ್ಯ, ಸೋಮಣ್ಣ, ರಂಗಸ್ವಾಮಿ ಹಾಜರಿದ್ದರು.