ಸುಸ್ಥಿರ ಅಂತರ್ಜಲ ನಿರ್ವಹಣೆ ಎಲ್ಲರ ಜವಾಬ್ದಾರಿ

| Published : Mar 27 2024, 01:01 AM IST

ಸಾರಾಂಶ

ಕನಕಪುರ: ಸುಸ್ಥಿರ ಅಂತರ್ಜಲ ನಿರ್ವಹಣೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ಅಟಲ್ ಭೂಜಲ ಯೋಜನೆ ಮಾಹಿತಿ ಶಿಕ್ಷಣ ಸಂವಹನ ತಜ್ಞ ಡಾ. ಚಂದ್ರ(ನಮನ ಚಂದ್ರು) ತಿಳಿಸಿದರು.

ಕನಕಪುರ: ಸುಸ್ಥಿರ ಅಂತರ್ಜಲ ನಿರ್ವಹಣೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ಅಟಲ್ ಭೂಜಲ ಯೋಜನೆ ಮಾಹಿತಿ ಶಿಕ್ಷಣ ಸಂವಹನ ತಜ್ಞ ಡಾ. ಚಂದ್ರ(ನಮನ ಚಂದ್ರು) ತಿಳಿಸಿದರು.

ನಗರದ ಹೊಸಕೋಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಹಾಗೂ ಎಚ್.ಕೆ. ಸಿ.ಎ.ಎಲ್ ಸಂಸ್ಥೆ,ಇಷ್ಟ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿದತ್ತ ನೀರು ಜೀವನದ ಮೂಲತತ್ವವಾಗಿದ್ದು ಪ್ರತಿಯೊಬ್ಬರೂ ಮುಂದಿನ ಪೀಳಿಗೆಗೆ ನಮ್ಮ ಜಲ ಸಂಪನ್ಮೂಲಗಳನ್ನು ರಕ್ಷಿಸಿ ಸುಸ್ಥಿರವಾಗಿ ಸಂರಕ್ಷಿಸುವ ಬದ್ಧತೆಯೊಂದಿಗೆ ಪ್ರತಿನಿತ್ಯ ಬಳಸುವ ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿದರು,

ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಕಡ್ಡಾಯವಾಗಿ ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದರ ಮೂಲಕ ಅಂತರ್ಜಲ ಸಂರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.

ಪ್ರಾಂಶುಪಾಲ ಹುನುಮೇಗೌಡ ಮಾತನಾಡಿ, ಮಾನವನ ಉತ್ತಮ ಆರೋಗ್ಯಕ್ಕೆ ನೀರು ಪ್ರಮುಖವಾದದ್ದು, ನಾವೆಲ್ಲರೂ ದಿನನಿತ್ಯ ನೀರಿನ ಮಹತ್ವ ತಿಳಿದುಕೊಂಡು ನೀರನ್ನು ಅನವಶ್ಯಕವಾಗಿ ವ್ಯರ್ಥ ಮಾಡದೆ ಜಲ ಸಂರಕ್ಷಕ ಸ್ವಯಂಸೇವಕರಾಗಿ ನೀರನ್ನು ಉಳಿಸೋಣ ಎಂದರು.

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಡಾ. ಕೂಗಿ ಗಿರಿಯಪ್ಪ ಮಾತನಾಡಿ, ಸಕಲ ಜೀವ ರಾಶಿಗಳಿಗೂ ನೀರು ಬೇಕು ನೈಸರ್ಗಿಕವಾಗಿ ಬರುವ ಮಳೆಯ ನೀರನ್ನು ಭೂಮಿಗೆ ಇಂಗಿಸಿಕೊಂಡು ಅಂತರ್ಜಲ ಬತ್ತದ ಹಾಗೆ ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವುದರ ಮೂಲಕ ಜಲಮೂಲಗಳ ಸಂರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಇಷ್ಟ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹೆಚ್.ಪ್ರವೀಣ್ ಕುಮಾರ್ ಜಲ ಪ್ರತಿಜ್ಞೆ ಬೋಧಿಸಿದರು.

ಪರಿಸರ ಪ್ರೇಮಿ, ಗಾಯಕ ಹನಿಯೂರು ಎಚ್.ಎಸ್ ಲೋಕೇಶ ತಂಡ ಗೀತ ಗಾಯನ ನಡೆಸಿಕೊಟ್ಟರು. ಶಿಕ್ಷಕರಾದ ಹೇಮಂತ್ ಕುಮಾರ್, ಇಲಿಯಾಸ್ ಪಾಷಾ, ಮಾತೃಶ್ರೀ ನಮನ ಟ್ರಸ್ಟ್ ಕಾರ್ಯದರ್ಶಿ ಎಂ ನಾಗೇಶ ಮೊದಲಾದವರು ಹಾಜರಿದ್ದರು.ಕೆ ಕೆ ಪಿ ಸಿದಿ 03:

ಹೊಸಕೋಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಹಾಗೂ ಎಚ್‌ಕೆ ಸಿಎಎಲ್‌ ಸಂಸ್ಥೆ, ಇಷ್ಟ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ನಡೆಯಿತು.