ಹೊಸಪೇಟೆ: ಪರಿಸರ ಸಂರಕ್ಷಣೆ ಎಂದರೆ ಕೇವಲ ಸಸಿ ನೆಡುವುದಲ್ಲ, ಅದೊಂದು ಜೀವನಶೈಲಿ. ಇಂದು ಉತ್ತಮ ಪರಿಸರ ಉಳಿಸಿದರೆ ಮಾತ್ರ ಆರೋಗ್ಯಕರ ಸುಸ್ಥಿರ ಸಮಾಜ ಕಟ್ಟಲು ಸಾಧ್ಯ ಎಂದು ಬಲ್ಡೋಟ ಸಮೂಹದ ಸಮಾಜಸೇವಾ ವಿಭಾಗದ ಉಪಾಧ್ಯಕ್ಷ ಹಾಗೂ ಮುಖ್ಯಸ್ಥ ಎಚ್.ಕೆ. ರಮೇಶ್ ಅಭಿಪ್ರಾಯಪಟ್ಟರು.
ನಗರದ ಟಿ.ಬಿ. ಡ್ಯಾಂ ಪದವಿಪೂರ್ವ ಕಾಲೇಜಿನ ಆವರಣದಲ್ಲಿ, ಬಲ್ಡೋಟ ಸಮೂಹದ ಎಂ.ಎಸ್.ಪಿ.ಎಲ್ ಲಿಮಿಟೆಡ್, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಸ್ಥಳೀಯ ನಗರಸಭೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಲ್ಡೋಟ ಸಂಸ್ಥೆಯು ಕಳೆದ ಮೂರು ವರ್ಷಗಳಲ್ಲಿ 30 ಸಾವಿರ ಗಿಡ ನೆಟ್ಟಿದ್ದು, ಅದರಂತೆ ಈವರೆಗೆ ಸುಮಾರು 20 ಲಕ್ಷದ 50 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿದ್ದೇವೆ. ಇದರಂತೆ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ನೀಡಲು ಸಾಧ್ಯ ಎಂದು ಅವರು ಹೇಳಿದರು.
ಸ್ಥಳೀಯ ಪರಿಸರವಾದಿ ಪ್ರಭಾಕರ್ ಮಾತನಾಡಿ, ಬಲ್ಡೋಟ ಸಮೂಹವು ಹೊಸಪೇಟೆ ನಗರವನ್ನು ಹಸಿರೀಕರಣಗೊಳಿಸುವಲ್ಲಿ ವಹಿಸುತ್ತಿರುವ ಪಾತ್ರ ಶ್ಲಾಘನೀಯ. ಸಂಸ್ಥೆ ನೆಟ್ಟ ಸಸಿಗಳು ಇಂದು ನಗರದ ಪಾಲಿಗೆ ದಟ್ಟ ಅರಣ್ಯದಂತೆ ರಕ್ಷಣೆ ನೀಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ರೇಖಾ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಬದಲಾವಣೆಯ ರೂವಾರಿಗಳು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಸಸಿಯನ್ನು ದತ್ತು ಪಡೆದು, ಅದು ಮರವಾಗಿ ಬೆಳೆಯುವವರೆಗೆ ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜನರಲ್ ಮ್ಯಾನೇಜರ್ ಸಿಎಸ್‌ಆರ್ ಅಶ್ವಿನಕುಮಾರ್, ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯ ವಿಜಯಭಾಸ್ಕರ್ ಹಾಗೂ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ತಮ್ಮ ವಿಚಾರಗಳನ್ನು ಸಭೆಯಲ್ಲಿ ಮಂಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಪತಿ, ನಗರಸಭೆ ಸದಸ್ಯ ಜಿ.ಎಸ್. ಹನುಮಂತಪ್ಪ, ಬಲ್ಡೋಟ ಸಮೂಹದ ವೇಣು ಮಡಿಚರ್ಲಾ, ನರೇಂದ್ರ, ಸಂಜನಾ ಪಾಠಕ್, ಅನ್ನಪೂರ್ಣ ಸದಾಶಿವ, ರೆಡ್ ಕ್ರಾಸ್ ಪದಾಧಿಕಾರಿಗಳು, ಎಂ.ಎಸ್.ಪಿ.ಎಲ್ ಸಿಬ್ಬಂದಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕು. ಮೋನಿಕಾ ಪ್ರಾರ್ಥಿಸಿದರು. ಬಿ.ಎಂ. ನಾಗರಾಜ್ ಸ್ವಾಗತಿಸಿದರು, ಶಿಕ್ಷಕಿಯರಾದ ದೀಪಾ ವಂದಿಸಿದರು. ನಳಿನಾ ನಿರೂಪಿಸಿದರು.