ಸಾರಾಂಶ
ಬೆಂಗಳೂರು : ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಹಾಗೂ ‘ಕನ್ನಡಪ್ರಭ’ ಸಹಯೋಗದಲ್ಲಿ ಆಯೋಜಿಸಿರುವ 4ನೇ ಆವೃತ್ತಿಯ ‘ಸುವರ್ಣ ಶಿಕ್ಷಣ ಮೆಗಾ ಎಜುಕೇಶನ್ ಎಕ್ಸ್‌ಪೋ’ ಜೂನ್ 8 ಮತ್ತು 9ರ ಶನಿವಾರ ಮತ್ತು ಭಾನುವಾರ ನಗರದ ಮಲ್ಲೇಶ್ವರ ಶಾಲಾ ಮೈದಾನದಲ್ಲಿ ನಡೆಯಲಿದೆ.
ಮೇಳವು ಎರಡೂ ದಿನ ಬೆಳೆಗ್ಗೆ 10 ಗಂಟೆಗೆ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ ಪ್ರಕಾಶ್ ಪಾಟೀಲ್, ನಟ ಯುವರಾಜ್ ಕುಮಾರ್ ಹಾಗೂ ಮಲ್ಲೇಶ್ವರ ಶಾಸಕ ಡಾ। ಸಿ.ಎನ್.ಅಶ್ವತ್ಥ ನಾರಾಯಣ ಅವರು ಶನಿವಾರ ದೀಪ ಬೆಳಗುವ ಮೂಲಕ ಮೇಳವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ ಎರಡು ದಿನಗಳ ಮೇಳದಲ್ಲಿ ನಟಿಯರಾದ ರಾಧಿಕಾ ಚೇತನ್, ಪೂಜಾ ಗಾಂಧಿ, ನಟರಾದ ದಕ್ಷಪತಿ ನವೀನ್, ಪ್ರಥಮ್ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರು, ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಕುಲಪತಿಗಳು, ವಿವಿಧ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.
ಈ ಎಕ್ಸ್ ಪೋದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ಪದವಿ, ಪಾಲಿಟೆಕ್ನಿಕ್ ಕಾಲೇಜುಗಳು, ವಿಶ್ವವಿದ್ಯಾಲಯಗಳು ಸೇರಿದಂತೆ ಒಂದೇ ಸೂರಿನಡಿ ಸುಮಾರು 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ ಉತ್ತೀರ್ಣರಾದವರಿಗೆ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಉತ್ತಮ ಮಾರ್ಗದರ್ಶನ ದೊರೆಯಲಿದೆ. ಯಾವ ಕೋರ್ಸು, ಯಾವ ಕೌಶಲ್ಯ ತರಬೇತಿ ಪಡೆದುಕೊಂಡರೆ ಯಾವ್ಯಾವ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ. ಲಭ್ಯವಿರುವ ವಿದ್ಯಾರ್ಥಿವೇತನದ ಸೌಲಭ್ಯಗಳಾವು? ಎಂಬ ಬಗ್ಗೆ ಮಾಹಿತಿ ದೊರೆಯಲಿದೆ. ಅದೇ ರೀತಿ ನೀಟ್, ಸಿಇಟಿ ಸೇರಿದಂತೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ್‍ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ತಮ್ಮ ರ್‍ಯಾಂಕಿಗೆ ತಕ್ಕಂತೆ ಯಾವ ಕೋರ್ಸು ಆಯ್ಕೆ ಉತ್ತಮ, ಯಾವ ಕಾಲೇಜಿನಲ್ಲಿ ಸೀಟು ದೊರೆಯಲಿದೆ ಎಂಬಿತ್ಯಾದಿ ವಿವರಗಳನ್ನು ಪರಿಣಿತರು, ಪ್ರಾಧ್ಯಾಪಕರು ನೀಡಲಿದ್ದಾರೆ. ಜೊತೆಗೆ ಸ್ಥಳದಲ್ಲೇ ದಾಖಲಾತಿ, ವಿದ್ಯಾರ್ಥಿವೇತನ, ಪ್ಲೇಸ್ ಮೆಂಟ್ ಭರವಸೆ ಈ ಎಲ್ಲಾ ವಿಷಯಗಳ ಬಗ್ಗೆ ಕೂಡ ತಿಳಿಸಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ನ ಸಂಪಾದಕ ಅಜಿತ್ ಹನುಮಕ್ಕನವರ ಹಾಗೂ ರಾಜಕೀಯ ವಿಶ್ಲೇಷಕ ಪ್ರಶಾಂತ್ ನಾತು ಅವರು ವಿಚಾರ ಸಂಕಿರಣಗಳನ್ನು ನಡೆಸಿಕೊಡಲಿದ್ದಾರೆ. ಜೊತೆಗೆ ವಿವಿಧ ವಿಶ್ವ ವಿದ್ಯಾಲಯಗಳ ಕುಲಪತಿಗಳಿಂದ ಶೈಕ್ಷಣಿಕ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಲವು ವಿಶೇಷ ಉಡುಗರೆಗಳು ಕೂಡ ಕಾದಿವೆ.