ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಿಯುಸಿ ನಂತರ ವ್ಯಾಸಂಗ ಮಾಡಲು ಕೋರ್ಸ್‌ಗಳು ಮತ್ತು ಕಾಲೇಜುಗಳ ಆಯ್ಕೆಗೆ ಸಮಗ್ರ ಮಾರ್ಗದರ್ಶನ ಮತ್ತು ಮಾಹಿತಿ ನೀಡುವ ಎರಡು ದಿನಗಳ ‘ಸುವರ್ಣ ಶಿಕ್ಷಣ ಮೆಗಾ ಎಜುಕೇಶನ್ ಎಕ್ಸ್‌ಪೋ’ ಅನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಶನಿವಾರ ಉದ್ಘಾಟಿಸಿದರು.ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ ಎದುರಿನ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಈ ಬೃಹತ್ ಶಿಕ್ಷಣ ಮೇಳದಲ್ಲಿ ರಾಜ್ಯದ ಸುಮಾರು 50 ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಭಾಗವಹಿಸಿವೆ. ಒಂದೇ ಸೂರಿನಡಿ ಎಂಜಿನಿಯರಿಂಗ್, ಮೆಡಿಕಲ್, ನರ್ಸಿಂಗ್, ಬಿ.ಎಸ್ಸಿ, ಬಿಕಾಂ, ಡಿಪ್ಲೋಮಾ, ಆ್ಯನಿಮೇಷನ್ ಸೇರಿದಂತೆ ನೂರಾರು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು, ಪೋಷಕರಿಗೆ ಸುವರ್ಣವಕಾಶ ಇದೆ. ಮೊದಲ ದಿನವೇ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಎಕ್ಸ್‌ಪೋನಲ್ಲಿ ಭಾಗವಹಿಸಿದರು.
ಎಕ್ಸ್‌ಪೋ ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್, ಪ್ರತಿ ವರ್ಷ 1 ಲಕ್ಷ ಎಂಜಿನಿಯರ್‌ಗಳು ರಾಜ್ಯದ ಕಾಲೇಜುಗಳಿಂದ ಹೊರ ಬರುತ್ತಾರೆ. ಆದರೆ, ಶೇ.20ರಷ್ಟು ಜನರಿಗೆ ಮಾತ್ರ ಪ್ಲೇಸ್‌ಮೆಂಟ್ ಸಿಗುತ್ತದೆ. ಹೀಗಾಗಿ, ಶಿಕ್ಷಣದ ಜೊತೆಗೆ ಕೌಶಲ್ಯ, ಉತ್ತಮ ಸಂವಹನ ಕಲೆ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಪ್ರವರ್ಧಮಾನಕ್ಕೆ ಬರುತ್ತಿರುವ ಕೋರ್ಸ್‌ಗಳ ಬಗ್ಗೆ ತಿಳಿಯಬೇಕು. ಈಗ ಎಲ್ಲರೂ ಕಂಪ್ಯೂಟರ್ ಸೈನ್ಸ್ ಬೆನ್ನು ಬಿದ್ದಿದ್ದಾರೆ. ಆದರೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗಳು ಆಗುತ್ತವೆ ಎಂದು ಹೇಳಿದರು.ಎಐ, ರೊಬೊಟಿಕ್ಸ್, ಮಷೀನ್ ಲರ್ನಿಂಗ್ ಮುಂತಾದ ಭವಿಷ್ಯದ ಕೋರ್ಸ್‌ಗಳು ಮಹತ್ವವನ್ನು ಪಡೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳು ಭವಿಷ್ಯದ ಬದಲಾವಣೆಗಳ ಬಗ್ಗೆಯು ಯೋಚಿಸಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಎಕ್ಸ್‌ಪೋದಲ್ಲಿ ಇಂತಹ ನೂರಾರು ಕೋರ್ಸ್‌ಗಳನ್ನು ಅನೇಕ ಕಾಲೇಜುಗಳ ಆಫರ್ ಮಾಡುತ್ತಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇದು ಭಾರಿ ಅನುಕೂಲ ಮಾಡಿಕೊಡುತ್ತದೆ. ಪ್ರಯೋಜನ ಪಡೆಯಬೇಕು ಎಂದು ಸಚಿವ ಪಾಟೀಲ್ ಕರೆ ನೀಡಿದರು.
ಶಾಸಕ ಡಾ। ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಉದ್ಯೋಗಾವಕಾಶಗಳ ಕುರಿತು ಸರಿಯಾಗಿ ಪರಿಶೀಲನೆ ನಡೆಸಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಎಐ ಮತ್ತು ರೊಬೋಟಿಕ್ಸ್ ಪ್ರಮುಖ ಪಾತ್ರ ವಹಿಸುವ ಕಾರಣ ಕೋರ್ಸ್ ಆಯ್ಕೆ ವಿಚಾರದಲ್ಲಿ ಎಚ್ಚರ ವಹಿಸಬೇಕು. ಸುವರ್ಣ ಸುದ್ದಿ ವಾಹಿನಿ ಮತ್ತು ಕನ್ನಡಪ್ರಭ ಆಯೋಜಿಸಿರುವ ಈ ಎಕ್ಸ್‌ಪೋದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.ನಟ ಯುವರಾಜಕುಮಾರ್ ಮಾತನಾಡಿ, ಪ್ರತಿಯೊಬ್ಬರಿಗೂ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲ, ಕನಸು ಇರುತ್ತದೆ. ಆದರೆ, ನನಸಾಗಲು ಸಮಯ ತೆಗೆದುಕೊಳ್ಳಬಹುದು. ಆದರೆ, ನಾವು ಪಡೆಯುವ ಶಿಕ್ಷಣ ಯಾವತ್ತೂ ಕೈಕೊಡುವುದಿಲ್ಲ. ಹೀಗಾಗಿ, ಪದವಿ ವ್ಯಾಸಂಗಕ್ಕೆ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಕೋರ್ಸ್ ಆಯ್ಕೆಗಾಗಿ ಅನೇಕ ಕಾಲೇಜುಗಳಿಗೆ ಓಡಾಡುವ ಬದಲು ಈ ಎಕ್ಸ್‌ಪೋದಲ್ಲಿ ಭಾಗವಹಿಸಿ ಎಲ್ಲಾ ಮಾಹಿತಿಯನ್ನು ಒಂದೆಡೆ ಪಡೆಯಬಹುದು ಎಂದರು.ಪೂಜಾ ಗಾಂಧಿ ಭೇಟಿ
ಎಕ್ಸ್‌ಪೋಗೆ ಭೇಟಿ ನೀಡಿದ ನಟಿ ಪೂಜಾ ಗಾಂಧಿ, ತಮಗಿಷ್ಟದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮುಂದಿನ ಶೈಕ್ಷಣಿಕ ಜೀವನಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಸಿಇಟಿ ಪರೀಕ್ಷೆಯ ಬಿಎನ್‌ವೈಎಸ್ ಮತ್ತು ಬಿ.ಎಸ್ಸಿ ಕೃಷಿಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿ ನಿಹಾರ್‌ಗೆ ಸನ್ಮಾನಿಸಲಾಯಿತು. ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ್ ಉಪಸ್ಥಿತರಿದ್ದರು.ಡಿಸ್ಕೌಂಟ್, ಸ್ಕಾಲರ್ಶಿಪ್ವಿವಿಧ ಕೋರ್ಸ್‌ಗಳಿಗೆ ರಿಯಾಯಿತಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ವಿವಿಧ ಯೋಜನೆಗಳ ಅಡಿ ಲಭ್ಯವಾಗುವ ಸ್ಕಾಲರ್‌ಶಿಪ್‌ಗಳ ಬಗ್ಗೆಯು ಎಕ್ಸ್‌ಪೋದಲ್ಲಿ ಮಾಹಿತಿ ಸಿಗುತ್ತದೆ. ಸ್ಥಳದಲ್ಲೇ ಪ್ರವೇಶ ಪಡೆಯಬಹುದು. ಎಕ್ಸ್‌ಪೋದಲ್ಲಿ ಕ್ವಿಜ್ ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಬಹುಮಾನ, ಉಡುಗೊರೆಗಳನ್ನು ಗೆಲ್ಲಬಹುದು. ಕೋರ್ಸ್‌ಗಳ ಮಾಹಿತಿ
ಎಂಜಿನಿಯರಿಂಗ್, ಮೆಡಿಕಲ್, ಡಿಪ್ಲೋಮಾ, ನರ್ಸಿಂಗ್, ಆ್ಯನಿಮೇಷನ್, ವಿವಿಧ ಪದವಿಗಳು ಸೇರಿದಂತೆ ನೂರಾರು ಕೋರ್ಸ್‌ಗಳ ಮಾಹಿತಿ ಎಕ್ಸ್‌ಪೋದಲ್ಲಿ ಸಿಗುತ್ತದೆ. ಸಿಇಟಿ ರ್‍ಯಾಂಕಿಂಗ್ ಆಧಾರದ ಮೇಲೆ ಸರ್ಕಾರಿ ಸೀಟ್, ಮ್ಯಾನೇಜ್‌ಮೆಂಟ್ ಕೋಟಾ ಸೀಟ್ ಮತ್ತು ಯಾವ ಕೋರ್ಸ್‌ನ ಸೀಟ್ ಸಿಗಬಹುದು ಎನ್ನುವ ಮಾಹಿತಿ ಸಿಗುತ್ತದೆ. ಕಾಲೇಜುಗಳು, ಹಾಸ್ಟೇಲ್ ಸೌಲಭ್ಯ, ಮೂಲಸೌಕರ್ಯ, ಶುಲ್ಕದ ಮಾಹಿತಿ ಸೇರಿ ಸಮಗ್ರ ಮಾಹಿತಿಯನ್ನು ಎಕ್ಸ್‌ಪೋದಲ್ಲಿ ವಿದ್ಯಾರ್ಥಿಗಳು, ಪೋಷಕರು ಪಡೆದುಕೊಳ್ಳಬಹುದಾಗಿದೆ.