ಸುವರ್ಣ ನ್ಯೂಸ್ ವರದಿಗಾರ, ಕ್ಯಾಮರಾಮನ್ ಮೇಲೆ ಹಲ್ಲೆ, ಪ್ರತಿಭಟನೆ

| Published : Aug 08 2025, 01:03 AM IST

ಸಾರಾಂಶ

ಬೆನಕ ಆಸ್ಪತ್ರೆಗೆ ವರದಿ ಮಾಡಲು ತೆರಳಿದ್ದ ವೇಳೆಯಲ್ಲಿ ಏಷಿಯಾನೆಟ್ ಸುವರ್ಣನ್ಯೂಸ್‌ನ ವರದಿಗಾರ ಹರೀಶ್ ಹಾಗೂ ಕ್ಯಾಮರಾಮನ್ ನವೀನ್ ಪೂಜಾರಿ ಅವರ ಮೇಲೆ ಸೌಜನ್ಯ ಪರ ಹೋರಾಟಗಾರರಾದ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣನವರ್ ಹಾಗೂ ಇತರರು ಹಲ್ಲೆ ಮಾಡಿದ್ದಾರೆ.

ಕೊಪ್ಪಳ:

ಉಜರೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗಾರ ಹಾಗೂ ಕ್ಯಾಮರಾಮನ್ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ನಗರದ ಅಶೋಕ ವೃತ್ತದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬೆನಕ ಆಸ್ಪತ್ರೆಗೆ ವರದಿ ಮಾಡಲು ತೆರಳಿದ್ದ ವೇಳೆಯಲ್ಲಿ ಏಷಿಯಾನೆಟ್ ಸುವರ್ಣನ್ಯೂಸ್‌ನ ವರದಿಗಾರ ಹರೀಶ್ ಹಾಗೂ ಕ್ಯಾಮರಾಮನ್ ನವೀನ್ ಪೂಜಾರಿ ಅವರ ಮೇಲೆ ಸೌಜನ್ಯ ಪರ ಹೋರಾಟಗಾರರಾದ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣನವರ್ ಹಾಗೂ ಇತರರು ಹಲ್ಲೆ ಮಾಡಿದ್ದಾರೆ. ಕರ್ತವ್ಯನಿರತ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಜನರ ಧ್ವನಿಯಾಗಿ ಮಾಧ್ಯಮಗಳು ಕೆಲಸ ಮಾಡುತ್ತಿವೆ. ಅಂಥ ಕರ್ತವ್ಯದ ವೇಳೆ ಹಲ್ಲೆ, ದೌರ್ಜನ್ಯ, ಬೆದರಿಕೆ ತರವಲ್ಲ. ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಸುಮ್ಮನಿದ್ದರೆ ಸಾಲದು. ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ರವೀಂದ್ರ ವಿ.ಕೆ., ಪ್ರಧಾನ ಕಾರ್ಯದರ್ಶಿ ದತ್ತು ಕಮ್ಮಾರ ಸೇರಿದಂತೆ ಪತ್ರಕರ್ತರು ಇದ್ದರು.