ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ತರುತ್ತಿರುವುದನ್ನು ಖಂಡಿಸಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಬೋವಿ (ವಡ್ಡರ) ಬಂಜಾರ, (ಲಮಾಣಿ) ಕೋರಮ-ಕೊರಚ ಜಾತಿಗಳ ಮಹಾ ಒಕ್ಕೂಟ ರಾಜ್ಯಾಧ್ಯಕ್ಷ ವೈ. ಕೋಟ್ರೇಶ ಹೇಳಿದರು.ಭಾನುವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ತಂದು ಬೋವಿ (ವಡ್ಡರ) ಬಂಜಾರ, (ಲಮಾಣಿ) ಕೋರಮ- ಕೊರಚ ಜಾತಿಗಳಿಗೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ಒಳ ಮೀಸಲಾತಿಯಿಂದ ವಿವಿಧ ದಲಿತ ಸಮಾಜದ 99 ಜಾತಿಗಳನ್ನು ಹೊರಗಿಡುವ ಹುನ್ನಾರ ನಡೆಸಿದೆ. ಇದನ್ನು ನಮ್ಮ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಬೋವಿ ಸಮಾಜ ರಾಜ್ಯದಲ್ಲಿ 40 ಲಕ್ಷ ಸಂಖ್ಯೆಯಲ್ಲಿದೆ. ರಾಜ್ಯ ಸರ್ಕಾರ ಯಾವುದೋ ಒತ್ತಡಕ್ಕೆ ಮಣಿದು ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗೆ ಸಮಿತಿ ರಚನೆ ಮಾಡಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಿದೆ. ಇದು ದೊಡ್ಡ ದುರಂತ ಎಂದರು.ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್ ಅವರ ಮೇಲೆ ಅಪಾರ ಗೌರವ ಇದೆ. ಇವರ ನೇತೃತ್ವದ ಕಮಿಟಿಯನ್ನು ರಾಜ್ಯ ಸರ್ಕಾರ ತೆಗೆದು ಹಾಕಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
1952ರಿಂದಲೂ ಲೋಕಸಭೆ ಚುನಾವಣೆಯಾಗಿವೆ. ಅಲ್ಲಿಂದ ಇಲ್ಲಿಯವರೆಗೂ ಯಾವ ಸಮಾಜದವರು ಎಷ್ಟು ಜನ ಸಂಸದರು, ಕೇಂದ್ರ ಸಚಿವರಾಗಿದ್ದಾರೆ. ಐಎಎಸ್ ಅಧಿಕಾರಿಗಳಾಗಿದ್ದಾರೆ ಎನ್ನುವುದನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಬೋವಿ (ವಡ್ಡರ) ಬಂಜಾರ, (ಲಮಾಣಿ) ಕೋರಮ-ಕೊರಚ ಜಾತಿಗಳಿಗೆ ಮೂಲ ಸೌಕರ್ಯ ಇಲ್ಲ. ಸರ್ಕಾರ ಮೊದಲು ಒಳಮೀಸಲಾತಿ ಜಾರಿ ಮಾಡುವ ಮುನ್ನ ನಮ್ಮ ಸಮಾಜದ ಮುಖಂಡರೊಂದಿಗೆ ಯಾವುದೇ ಸಭೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ವಡ್ಡರವಾಡಿಯಲ್ಲಿ ವಿವಾಹಿತ ಮಹಿಳೆ ಹಾಗೂ ತಾಯಿಯ ಮೇಲೆ ಅರೆಬೆತ್ತಲೆ ಹಲ್ಲೆ ಮಾಡಿದ್ದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಪೊಲೀಸರು ಮುಲ್ಲಾಜಿಲ್ಲದೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.ಚಂದ್ರಕಾಂತ ಚಹಾಣ್, ರಾಮಜಿ ಭಜಂತ್ರಿ, ವೆಂಕಟೇಶ್, ಮಂಜುನಾಥ ಈರಮನಿ, ಹರೀಶ್ ವಡ್ಡರ, ಶುಶೀಲಾ, ಉದಯಕುಮಾರ, ಸಿದ್ದು ಪಾತ್ರೋಟ, ಪ್ರಕಾಶ ಬಂಡಿವಡ್ಡರ್ ಇತರರು ಉಪಸ್ಥಿತರಿದ್ದರು.